ದಾವಣಗೆರೆ: ಕೋವಿಡ್-19 ವೈರಾಣು ಸೋಂಕಿನಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಲು ಅರ್ಜಿಗಳನ್ನು ಪಡೆಯಲು ಸೂಚನೆ ನೀಡಲಾಗಿದೆ.
ಸಂತ್ರಸ್ಥ ಕುಟುಂಬದವರು ಈ ಕುರಿತಂತೆ ಅರ್ಜಿಯನ್ನು ತಾಲ್ಲೂಕು ಕಚೇರಿಯಲ್ಲಿ ಅಥವಾ ತಮ್ಮ ವ್ಯಾಪ್ತಿಯ ನಾಡಕಚೇರಿಯಲ್ಲಿ ನಿಗದಿತ ನಮೂನೆ-1 ಅನ್ನು ಪಡೆದುಕೊಂಡು, ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ವ್ಯಾಪ್ತಿಯ ನಾಡಕಚೇರಿಯಲ್ಲಿ ಸಲ್ಲಿಸುವಂತೆ ಕೋರಿದೆ. ಈಗಾಗಲೇ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಅರ್ಜಿ ಸಲ್ಲಿಸುವವರು ಕೋವಿಡ್-19 ಪಾಸಿಟಿವ್ ಅಥವಾ ನೆಗೆಟಿವ್ ರಿಪೋರ್ಟ್, ರೋಗಿ ಸಂಖ್ಯೆ ಪಿ-ನಂಬರ್, ಕ್ಲೀನಿಕಲ್ ರೇಡಿಯಾಲಜಿ ಮತ್ತು ಪ್ರಯೋಗಾಲಯ ವರದಿ ವೈದ್ಯರಿಂದ ದೃಢೀಕರಿಸಿರಬೇಕು, ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ, ಅರ್ಜಿದಾರರ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ನಮೂನೆ-2 ರಲ್ಲಿ ಸ್ವಯಂ ಘೋಷಣಾ ಪತ್ರ, ನಮೂನೆ-3 ರಲ್ಲಿ ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕೆಂದು ಹೇಳಲಾಗಿದೆ.