ತುಮಕೂರು: ತುಮಕೂರು ಜಿಲ್ಲೆ ಪಾವಗಡದದ ಕನುಮಲಚೆರವು ಬಡಾವಣೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮನೆಗೆ ವಿದ್ಯುತ್ ಸಂಪರ್ಕ ಮತ್ತು ನೀರಿನ ಸೌಲಭ್ಯ ಕಡಿತಗೊಳಿಸಲಾಗಿದೆ.
ಬಡಾವಣೆಯಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ 20 ದಿನಗಳಿಂದ ಬಡಾವಣೆಗೆ ವಿದ್ಯುತ್ ಸಂಪರ್ಕವಿಲ್ಲದೆ ಮತ್ತು ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ ಎಂದು ಹೇಳಲಾಗಿದೆ.
ಇಲ್ಲಿನ ನಿವಾಸಿಗಳು ಕೊರೋನಾ ಲಸಿಕೆ ಪಡೆಯಲು ಹಿಂಜರಿದಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಲಸಿಕೆ ಹಾಕಲು ಬಂದಿದ್ದ ಸಂದರ್ಭದಲ್ಲಿ ಸಮಯ ಕೇಳಲಾಗಿತ್ತು. ಕೂಲಿಕಾರ್ಮಿಕರು ಅಧಿಕವಾಗಿರುವುದರಿಂದ ಲಸಿಕೆ ಪಡೆದು ಮರುದಿನ ಕೆಲಸಕ್ಕೆ ರಜೆ ಹಾಕಬೇಕು. ಸಮಯ ಕೊಡಿ ಎಂದು ಕೇಳಿದ್ದರೂ, ಅಧಿಕಾರಿಗಳು ಏಕಾಏಕಿ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ನಿವಾಸಿಗಳು ದೂರಿದ್ದಾರೆ. ಆದರೆ, ಇದನ್ನು ಅಲ್ಲಗಳೆದ ಅಧಿಕಾರಿಗಳು ಡೆಪಾಸಿಟ್ ಪಾವತಿಸದವರ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಲಸಿಕೆಗೂ ನೀರು, ವಿದ್ಯುತ್ ಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.