ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಪರಿಸ್ಥಿತಿ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ.
ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಲಸಿಕೆ ಅಭಿಯಾನ ಚುರುಕುಗೊಳಿಸಲಾಗಿದೆ. ಶೇಕಡ 100 ರಷ್ಟು ಮೊದಲ ಡೋಸ್ ನೀಡಲಾಗಿದೆ. ಕೊರೋನಾಗೆ ಎಷ್ಟು ಕಡಿವಾಣ ಹಾಕುತ್ತೇವೆಯೋ ಅಷ್ಟು ಸಮಸ್ಯೆ ಕಡಿಮೆಯಾಗುತ್ತದೆ. ಯಾವುದೇ ರೂಪಾಂತರಿ ಆಗಿರಲಿ, ಅದನ್ನು ಗೆಲ್ಲಲು ಲಸಿಕೆ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಒಮಿಕ್ರೋನ್ ಸೋಂಕಿನಿಂದ ಆತಂಕಪಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿವೆ. ಒಮಿಕ್ರಾನ್ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ ಎಂದು ಹೇಳಿದ್ದಾರೆ.
ಲಸಿಕೆಯ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಲಸಿಕೆ ಹಾಕಿಸಿಕೊಂಡರೂ ಕೊರೋನಾ ಬರುತ್ತಿದೆ. ಮಾಸ್ಕ್ ನಿಂದ ಉಪಯೋಗವಿಲ್ಲ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇಂತಹ ಮಾತುಗಳಿಗೆ ಜನರು ಕಿವಿಗೊಡಬಾರದು. ಮಾರ್ಗಸೂಚಿ ಅನುಸರಿಸಬೇಕು, ಮಾಸ್ಕ್, ಸಾಮಾಜಿಕ ಅಂತರ, ಚಿಕಿತ್ಸೆ, ಪರೀಕ್ಷೆ ಮೊದಲಾದ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಸ್ಥಳೀಯ ಕಂಟೈನ್ಮೆಂಟ್ ಜೋನ್ ಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ದೇಶದ ಜನರಿಗೆ ಆರ್ಥಿಕವಾಗಿ ನಷ್ಟವಾಗಿದೆ. ನಮ್ಮ ಕ್ರಮಗಳಿಂದ ಜನರಿಗೆ ನೋವಾಗಬಾರದು. ಕಾಲಕಾಲಕ್ಕೆ ಮಾರ್ಗಸೂಚಿ ಬದಲಾವಣೆ ಮಾಡುವುದು ಮುಖ್ಯವಾಗಿದೆ. ಟ್ರ್ಯಾಕಿಂಗ್ ಮತ್ತು ಟ್ರೀಟ್ಮೆಂಟ್ ನಿಂದ ಜನ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷದ ಅನುಭವದ ಆಧಾರದ ಮೇಲೆ ಕೋವಿಡ್ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸನ್ನಿವೇಶ ಎದುರಿಸಲು ಮೂಲಸೌಲಭ್ಯಗಳ, ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಯಾವುದೇ ರೂಪಾಂತರಿ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.