ನವದೆಹಲಿ: ದೇಶಾದ್ಯಂತ ಕೊರೋನಾ ಎರಡನೆಯ ಆತಂಕದ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಮತ್ತಷ್ಟು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಎಲ್ಲರಿಗೂ ಲಸಿಕೆ ನೀಡಲು ಚಿಂತನೆ ನಡೆಸಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಈ ಬಗ್ಗೆ ಸುಳಿವು ನೀಡಿದ್ದು, ಶೀಘ್ರವೇ ಆದೇಶ ಹೊರಡಿಸುವ ಸಾಧ್ಯತೆ ಇದೆ.
60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡುತ್ತಿದ್ದು, ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಇದರೊಂದಿಗೆ 45 ವರ್ಷ ಒಳಗಿನವರೆಗೂ ಕೂಡ ಲಸಿಕೆ ಪಡೆಯುವ ಅವಕಾಶ ಕಲ್ಪಿಸಲು ಆರೋಗ್ಯ ಮಂತ್ರಾಲಯ ಚಿಂತನೆ ನಡೆಸಿದೆ.
ಸಚಿವ ಹರ್ಷವರ್ಧನ್ ಈ ಬಗ್ಗೆ ಮಾತನಾಡಿ, ಕೊರೋನಾ ನಿರೋಧಕ ಲಸಿಕೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದ್ದು, 4 ದಿನದಲ್ಲಿ ಒಂದು ಕೋಟಿಗೂ ಅಧಿಕ ಜನ ಲಸಿಕೆ ಮೊದಲ ಡೋಸ್ ಪಡೆಯಲಿದ್ದಾರೆ.ಎಲ್ಲ ವಯಸ್ಸಿನವರಿಗೂ ಲಸಿಕೆ ನೀಡುವ ಅವಕಾಶ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.