ಬೆಂಗಳೂರು: ಕೊರೋನಾ ಲಸಿಕೆ ಪಡೆದವರು ಮದ್ಯ ಸೇವಿಸಬಾರದು ಎಂದು ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ಲಸಿಕೆ ಎಷ್ಟುದಿನ ಎಷ್ಟು ಅವಧಿಯವರೆಗೆ ರೋಗ ನಿರೋಧಕ ಸಾಮರ್ಥ್ಯ ನೀಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಪಡೆದವರು ಮದ್ಯ ಸೇವಿಸದಂತೆ ಅವರು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು, ಲಸಿಕೆ ಪಡೆದವರು ಮದ್ಯಸೇವನೆ ಮಾಡಬಹುದೆಂದು ನಾನಂತೂ ಸಲಹೆ ನೀಡುವುದಿಲ್ಲ. ಲಸಿಕೆ ಬಂದಿದ್ದರೂ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.
ಲಸಿಕೆ ಪಡೆದ ನಂತರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ, ಅದು ಎಷ್ಟು ದಿನ ಉಳಿಯುತ್ತದೆ ಎನ್ನುವುದು ಗೊತ್ತಿಲ್ಲ. ಅವಕಾಶ ಬಂದಾಗ ಎಲ್ಲರೂ ಲಸಿಕೆ ಹಾಕಿಸಿಕೊಂಡು ಕೊರೋನಾವನ್ನು ಓಡಿಸಬೇಕಿದೆ. ಕೊರೋನಾ ದೂರವಾಗಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.