ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ 19 ರ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯಕ್ರಮವನ್ನು ಸರ್ಕಾರದ ಆದೇಶದಂತೆ ಜನವರಿ 10 ರಿಂದ ಜಿಲ್ಲೆಯಲ್ಲಿಯೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೂ ಸಹ ವೈದ್ಯರ ಸಲಹೆ ಮೇರೆಗೆ ಕೋವಿಡ್ 19 ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕುಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಪ್ರಸ್ತುತ ಈ ವರ್ಗದಲ್ಲಿ ಲಸಿಕೆ ಪಡೆಯಲು ಅರ್ಹರಿರುವ 8,300 ಜನರನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಇವರೆಲ್ಲರೂ ಲಸಿಕಾ ಕೇಂದ್ರಗಳಿಗೆ ಸ್ವಯಂಪ್ರೇರಿತರಾಗಿ ಆಗಮಿಸಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಲಸಿಕೆ ಪಡೆಯಲು ಅರ್ಹರಿರುವ 8,300 ಜನರನ್ನು ಮುನ್ನೆಚ್ಚರಿಕೆ ಲಸಿಕೆಯ ವ್ಯಾಪ್ತಿಗೆ ಆದಷ್ಟು ಶೀಘ್ರವೇ ಒಳಪಡಿಸುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲೂ ಉಚಿತ ಲಸಿಕೆ
2ನೇ ಡೋಸ್ ಲಸಿಕೆ ಪಡೆದು 9 ತಿಂಗಳನ್ನು ಪೂರೈಸಿರುವವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಈ ಮೊದಲೆರಡು ಡೋಸ್ಗಳಲ್ಲಿ ಪಡೆದಿರುವ ಲಸಿಕೆಯನ್ನೇ ಮುನ್ನೆಚ್ಚರಿಕೆ ಡೋಸ್ ಲಸಿಕೆಯಾಗಿ ನೀಡಲಾಗುವುದು. ಎಲ್ಲ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಮಂಗಳವಾರ ಲಸಿಕಾ ಮೇಳ
ಮೊದಲ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೂ ಕೋವಿಡ್ ಲಸಿಕೆ ನೀಡಲು ಜನವರಿ 11 ರಂದು ಜಿಲ್ಲೆಯ ನಗರ ಪ್ರದೇಶ ಸೇರಿದಂತೆ 157 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಲಸಿಕಾ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಸುಮಾರು 85 ಸಾವಿರ ಜನರಿದ್ದು ಅವರೆಲ್ಲರೂ ಸ್ವಯಂಪ್ರೇರಿತರಾಗಿ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದರು. 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರೆಲ್ಲರನ್ನು ಜನವರಿ 11 ರ ಒಳಗೆ 2 ಡೋಸ್ ಗಳ ಲಸಿಕಾಕರಣದ ವ್ಯಾಪ್ತಿಗೆ ಒಳಪಡಿಸುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.