ಬೆಂಗಳೂರು: ರಾಜ್ಯದಲ್ಲಿ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ, ಲಸಿಕೆ ಕೊರತೆಯಿಂದಾಗಿ ಬಹುತೇಕ ವ್ಯಾಕ್ಸಿನ್ ಸೆಂಟರ್ ಗಳಲ್ಲಿ ಜನಸಂದಣಿ ಕಂಡುಬರುತ್ತಿದೆ.
ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು ಎರಡನೇ ಡೋಸ್ ಪಡೆಯಲು ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿ ಪಡೆಯಬಹುದಾಗಿದೆ. ಆದರೆ, ಕೊವ್ಯಾಕ್ಸಿನ್ ಲಸಿಕೆ ಸದ್ಯಕ್ಕೆ ಲಭ್ಯವಿರುವುದಿಲ್ಲ. ಎರಡನೇ ಡೋಸ್ ಪಡೆಯುವವರಿಗೆ ಎಸ್ಎಂಎಸ್ ಬರುತ್ತದೆ. ಎಸ್ಎಂಎಸ್ ನಲ್ಲಿರುವ ಕೇಂದ್ರಕ್ಕೆ ಹೋಗಿ ವ್ಯಾಕ್ಸಿನ್ ಪಡೆಯಬಹುದಾಗಿದೆ. 18 ರಿಂದ 44 ವರ್ಷದವರಿಗೆ ಸದ್ಯಕ್ಕೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.
ಕೋವಿಶೀಲ್ಡ್ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ವಿಸ್ತರಿಸಲಾಗಿದೆ. ಅದೇ ರೀತಿ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡವರು ನಾಲ್ಕರಿಂದ ಆರು ವಾರಗಳಲ್ಲಿ ಎರಡನೇ ಡೋಸ್ ಪಡೆದುಕೊಳ್ಳಬೇಕಿದೆ. ಆದರೆ, ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲದೆ ಮೊದಲ ಡೋಸ್ ಪಡೆದುಕೊಂಡವರು ಅನಿವಾರ್ಯವಾಗಿ ಕಾಯುವಂತಾಗಿದೆ.
ಮುಂಚೂಣಿ ಕಾರ್ಯಕರ್ತರಿಗೆ ಶನಿವಾರದಿಂದ ಲಸಿಕೆ ನೀಡಲಾಗುತ್ತಿದ್ದು, ಕೋವಿಶೀಲ್ಡ್ ಮಾತ್ರ ನೀಡಲಾಗುತ್ತಿದೆ. ಕೊವ್ಯಾಕ್ಸಿನ್ ಲಭ್ಯವಿರುವುದಿಲ್ಲ. ಮೊದಲ ಡೋಸ್ ಇರಲಿ, ಎರಡನೇ ಡೋಸ್ ಪಡೆಯುವವರಿಗೆ ಕೊವ್ಯಾಕ್ಸಿನ್ ಸಿಗದಂತಾಗಿದೆ.
ಆದರೆ, ಬಹುತೇಕ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಿಗೆ ನೀಡಲು ನೇರವಾಗಿಯೇ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳು ತಮ್ಮ ಕಂಪನಿಗಳ ಉದ್ಯೋಗಿಗಳಿಗೆ ಲಸಿಕೆ ನೀಡಲು ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದಕ್ಕಾಗಿ 15 ದಿನಗಳ ಸ್ಲಾಟ್ ಬುಕಿಂಗ್ ಆಗಿವೆ ಎಂದು ಹೇಳಲಾಗಿದೆ.
ಜನಸಾಮಾನ್ಯರು ಮಾತ್ರ ಲಸಿಕಾ ಕೇಂದ್ರಗಳ ಬಳಿ ಬೆಳಗಿನ ಜಾವದಿಂದಲೇ ದಿನಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದ್ದರೆ, ಖಾಸಗಿ ಕಂಪನಿಗಳ ಸಿಬ್ಬಂದಿಗೆ ಸುಲಭವಾಗಿ ಲಸಿಕೆ ಸಿಗುತ್ತಿದೆ. ಮಾತ್ರವಲ್ಲದೆ, ಅವರ ಕುಟುಂಬದವರಿಗೂ ಕೂಡ ಸುಲಭವಾಗಿ ಲಸಿಕೆ ನೀಡಲಾಗುತ್ತಿದೆ. ಕೆಲವರು ಪ್ರಭಾವ ಬಳಸಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆಯಾಗುತ್ತಿಲ್ಲವೆಂದು ಹೇಳಲಾಗಿದ್ದರೂ, ಆಯ್ದ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಅನುಕೂಲಕರ ವ್ಯವಸ್ಥೆಯಿಂದಾಗಿ ಸುಲಭವಾಗಿ ಲಸಿಕೆ ಸಿಗುತ್ತಿದೆ. ಆದರೆ, ಸರ್ಕಾರಿ ಲಸಿಕಾ ಕೇಂದ್ರಗಳ ಬಳಿ ಮಾತ್ರ ಜನಜಂಗುಳಿಯೇ ನೆರೆಯುತ್ತಿದೆ ಎನ್ನಲಾಗಿದೆ.