ಬೆಂಗಳೂರು: ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೂ ರೋಗಲಕ್ಷಣ ಆಧರಿಸಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಕೊರೊನಾ ಸೋಂಕು ತಗುಲಿದ ಕೆಲವರಿಗೆ ಆರ್ಟಿಪಿಸಿಆರ್ ಟೆಸ್ಟ್ ಮತ್ತು ರ್ಯಾಪಿಡ್ ಮಾದರಿಯಲ್ಲಿ ನೆಗೆಟಿವ್ ವರದಿ ಬರುತ್ತಿದೆ. ಈ ಕಾರಣ ಸೋಂಕು ಲಕ್ಷಣ ಆಧಾರದ ಮೇಲೆ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಅನೇಕ ಪ್ರಕರಣಗಳಲ್ಲಿ ಆರ್ಟಿಪಿಸಿಆರ್ ಮತ್ತು ವಿವಿಧ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬರುತ್ತಿದೆ. ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ರೋಗದ ತೀವ್ರತೆ ಹೆಚ್ಚಾದ ಸಮಯದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈ ಗೊಂದಲ, ಸಮಸ್ಯೆ ನಿವಾರಿಸಲು ರೋಗಲಕ್ಷಣ ಆಧರಿಸಿ ಚಿಕಿತ್ಸೆ ನೀಡುವ ವಿಧಾನವನ್ನು ಅನುಸರಿಸುವಂತೆ ತಿಳಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ತೀವ್ರತರವಾದ ಕೊರೋನಾ ಸೋಂಕಿನ ಲಕ್ಷಣವಿದ್ದರೂ ಕೋವಿಡ್ ಟೆಸ್ಟ್ ನಲ್ಲಿ ಕೆಲವರಿಗೆ ನೆಗೆಟಿವ್ ಬರುತ್ತಿದೆ. ಪಾಸಿಟಿವ್ ವರದಿ ಇದ್ದರೆ ಮಾತ್ರ ಬಿಯು ನಂಬರ್ ಕೊಡಲಾಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಹಲವು ರೋಗಿಗಳ ಜೀವಕ್ಕೆ ಅಪಾಯವಾಗಿದೆ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬರುವವರ ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್ ವಿಧಾನ ಅನುಸರಿಸಿ ಆಸ್ಪತ್ರೆಗೆ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.