ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ದಿನಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ. ಚಿತಾಗಾರದ ಎದುರು ಮೃತದೇಹಗಳಿದ್ದ ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿದ್ದು, ಈ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಒಂದೇ ಚಿತಾಗಾರಕ್ಕೆ ಕಳಿಸಿದ್ದರಿಂದ ಸಮಸ್ಯೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತಾಗಾರಗಳ ಸಮಸ್ಯೆ ಸಂಬಂಧ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ನಿನ್ನೆ 14-15 ಸಾವು ಸಂಭವಿಸಿದೆ. ಅದು ಕೋವಿಡ್ ಸಾವಾಗಿರುವುದರಿಂದ ಒಂದೇ ಚಿತಾಗಾರಕ್ಕೆ ಕಳುಹಿಸಲಾಗಿದೆ. ಇದರಿಂದಾಗಿ ದಟ್ಟಣೆ ಉಂಟಾಗಿದೆ. ಬೇರೆ ಬೇರೆ ಕಡೆ ಕಳುಹಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಹೆಚ್ಚಳ ಅಂದಾಜು, ಕೈಗೊಳ್ಳಬೇಕಾದ ಕ್ರಮಗಳು ಮೊದಲಾದವುಗಳ ಕುರಿತಂತೆ ತಾಂತ್ರಿಕ ಸಲಹಾ ಸಮಿತಿಯು ವರದಿ ನೀಡಲಿದೆ. ಇದನ್ನು ಮುಖ್ಯಮಂತ್ರಿಗಳಿಗೆ ನೀಡಿದ ಬಳಿಕ ಚರ್ಚೆಯಾಗಲಿದೆ. ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಪಿಜಿ ವ್ಯಾಸಂಗ ಮಾಡಿದವರು ಒಂದು ವರ್ಷ ಕಡ್ಡಾಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಬೇಕೆಂದು ನಿಯಮ ಇದೆ. ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಪರವಾಗಿ ನಿರ್ಧಾರ ಕೈಗೊಂಡಿದೆ. ನೇಮಕ ಮಾಡುವವರೆಗೂ ಬೇರೆ ಕಡೆ ಕೆಲಸ ಮಾಡಲು ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನು ಇಲಾಖೆಯಿಂದ ಕೂಡ ಸಮ್ಮತಿ ಪಡೆಯಲು ಸೂಚಿಸಲಾಗಿದೆ ಎಂದರು.