
ನವದೆಹಲಿ: ದೇಶದ ಹಲವು ಕಡೆ ಕೊರೋನಾ ಸೋಂಕು ಭಾರಿ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಂಕು ತಡೆಗೆ ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.
ಹರಿಯಾಣ, ಕೇರಳ, ಪುದುಚೇರಿಯಲ್ಲಿ ಮಾಸ್ಕ್ ನೀತಿ ಕಡ್ಡಾಯಗೊಳಿಸಲಾಗಿದೆ. ಹರಿಯಾಣ ಮತ್ತು ಪುದುಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕೇರಳದಲ್ಲಿ ರೋಗಪೀಡಿತರು, ಗರ್ಭಿಣಿಯರು, ವೃದ್ಧರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ತಿಳಿಸಲಾಗಿದೆ. ಈ ವರ್ಗದವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸಿದ್ಧತೆ ಮತ್ತು ಮೂಲ ಸೌಕರ್ಯ ಪರೀಕ್ಷಿಸಲು ಏಪ್ರಿಲ್ 10 ಮತ್ತು 11ರಂದು ರಾಷ್ಟ್ರ ವ್ಯಾಪಿ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧ, ವೈದ್ಯಕೀಯ ಉಪಕರಣ, ಆಕ್ಸಿಜನ್ ಮೊದಲಾದವುಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ.