ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.
ಸಾರ್ವಜನಿಕ ಸಮಾರಂಭಕ್ಕೆ ನೂರರಿಂದ ಇನ್ನೂರು ಜನರ ಮಿತಿ, ಸಭೆ-ಸಮಾರಂಭಗಳಿಗೆ ಹೆಚ್ಚಿನ ಜನ ಸೇರಲು ನಿರ್ಬಂಧ, ಆಕ್ಸಿಜನ್ ಬೆಡ್ ಲಭ್ಯತೆ ಕುರಿತು ಚರ್ಚೆ ನಡೆಸಲಾಗಿದೆ.
ಸದ್ಯಕ್ಕೆ ಆಕ್ಸಿಜನ್ ಬೆಡ್ ಕೊರತೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕೋವಿಡ್ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸುವಂತೆ ಸಲಹೆ ಕೇಳಿ ಬಂದಿದೆ. ಈಗ ನಿಧಾನವಾಗಿ ಆಸ್ಪತ್ರೆಗಳಲ್ಲಿ ಬೆಡ್ ಭರ್ತಿಯಾಗುತ್ತಿರುವುದು, ಥಿಯೇಟರ್, ಶಾಪಿಂಗ್ ಮಾಲ್, ಸ್ವಿಮ್ಮಿಂಗ್ ಪೂಲ್, ಜಿಮ್, ಸಾರ್ವಜನಿಕ ಸ್ಥಳಗಳಲ್ಲಿ 50:50 ಮಿತಿ ಜಾರಿಗೊಳಿಸುವ ಬಗ್ಗೆ ಸಲಹೆ ನೀಡಲಾಗಿದೆ.
ತಮಿಳುನಾಡು, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ರಾಜ್ಯದಲ್ಲಿಯೂ ವ್ಯಾಕ್ಸಿನೇಷನ್ ಆಗದ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.