ಬಳ್ಳಾರಿ: ಕೋವಿಡ್ ರೋಗಿಗಳಿಗೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ’ಯಡಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಸರ್ಕಾರಿ ಕೋಟಾದಡಿಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜನಾರ್ಧನ್ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಿಹೆಚ್‍ಬಿಎಂಎಸ್ ಪೋರ್ಟಲ್ ಮೂಲಕ ಹಾಗೂ ಇತರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ರೆಫರೆಲ್ ಮೂಲಕ ಸರ್ಕಾರಿ ಕೋಟಾದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಇದರ ಜೊತೆಗೆ ಸರ್ಕಾರಿ ಕೋಟಾದ ರೋಗಿಗಳಿಗೆ ರೆಮ್‍ಡಿಸಿವಿರ್ ಲಸಿಕೆಯನ್ನು ಉಚಿತವಾಗಿ ಒದಗಿಸಲಾಗುತ್ತದೆ.
ಕೋವಿಡ್ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಲ್ಲಿ ಸರ್ಕಾರವು ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು. ಜನರಲ್ ವಾರ್ಡ್‍ಗೆ 10 ಸಾವಿರ ರೂ., ಹೆಚ್‍ಡಿಯುಗೆ 12 ಸಾವಿರ ರೂ., ಐಸೋಲೇಶನ್ ಐಸಿಯು ವೆಂಟಿಲೇಟರ್ ಇಲ್ಲದೆ 15 ಸಾವಿರ ರೂ. ಹಾಗೂ ಐಸೋಲೇಶನ್ ಐಸಿಯು ವೆಂಟಿಲೇಟರ್ ಸಹಿತ 25 ಸಾವಿರ ರೂ. ಎಂದು ಸರ್ಕಾರ ನಿಗದಿಪಡಿಸಿದ್ದು, ಈ ನಿಗದಿಪಡಿಸಿದ ದರಗಳಲ್ಲಿಯೇ ಚಿಕಿತ್ಸೆ ನೀಡಬೇಕು.
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರೆ ಅಥವಾ ಚಿಕಿತ್ಸೆ ನೀಡಲು ವಿಳಂಬ ಮಾಡಿದರೆ ಅಥವಾ ಸರ್ಕಾರ ನಿಗದಿ ಪಡಿಸಿರುವ ದರಗಳಿಗಿಂತ ಹೆಚ್ಚಿನ ದರವನ್ನು ವಿಧಿಸಿದರೆ 18004258330 ಗೆ ಹಾಗೂ 1912 ಅಥವಾ sastgrievance@gmail.com ಇ-ಮೇಲ್ ಮೂಲಕ ಮತ್ತು ದೂ.ಸಂ: 080 22536200 ಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.