ಮತ್ತೊಮ್ಮೆ ಲಾಕ್ಡೌನ್ ಜಾರಿಯಾಗುತ್ತದೆಯೇ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ದೇಶದೆಲ್ಲೆಡೆ ಕೊರೋನಾ ಎರಡನೇ ಅಲೆ ಶುರುವಾಗಿರುವುದು.
ದೇಶದ ಅನೇಕ ರಾಜ್ಯಗಳಲ್ಲಿ ಕೊರೋನಾ ಎರಡನೇ ಆಲೆ ಆತಂಕ ಮೂಡಿಸಿದೆ. ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈ ಮೀರಿದ್ದು ಕಳೆದ ವರ್ಷ ಜಾರಿಗೊಳಿಸಿದ ನಿರ್ಬಂಧಗಳನ್ನು ಮತ್ತೆ ಜಾರಿಗೆ ತರಲಾಗಿದೆ. ಅನೇಕ ರಾಜ್ಯಗಳ ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜೊತೆಗೆ ಕಠಿಣ ನಿರ್ಬಂಧಗಳನ್ನು ಕೂಡ ಜಾರಿಗೊಳಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕಠಿಣ ನಿರ್ಬಂಧಗಳನ್ನು ಹೇರಿರುವ ಸರ್ಕಾರ ಮುಂದೆ ಲಾಕ್ಡೌನ್ ಜಾರಿ ಮಾಡಲಿದೆಯೇ ಎನ್ನುವ ಆತಂಕ ಜನಸಾಮಾನ್ಯರಲ್ಲಿದೆ. ಕಳೆದ ವರ್ಷ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನಸಾಮಾನ್ಯರು ಮತ್ತೇನಾದರೂ ಜಾರಿಯಾದರೆ ಚೇತರಿಸಿಕೊಳ್ಳುವುದು ಭಾರಿ ಕಷ್ಟಸಾಧ್ಯವಾಗುತ್ತದೆ ಎನ್ನುವ ಆತಂಕದಲ್ಲಿದ್ದಾರೆ.
ಲಾಕ್ ಡೌನ್ ಜಾರಿ ಮಾಡಿದ್ರೆ ಆರ್ಥಿಕತೆಗೆ ಭಾರಿ ಪೆಟ್ಟು ಬೀಳುವ ಕಾರಣ ಕೇಂದ್ರ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಜಾರಿ ಮಾಡುವ ಸಾಧ್ಯತೆ ಇಲ್ಲ. ಕೊರೋನಾ ಲಸಿಕೆ ಬಂದ ನಂತರವೂ ಎರಡನೇ ಅಲೆ ಆರ್ಭಟ ಜೋರಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಜನರೇ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಲಾಕ್ಡೌನ್, ನೈಟ್ ಕರ್ಫ್ಯೂ ನಂತಹ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ.
ಕೇಂದ್ರ ಸರ್ಕಾರ ಆರ್ಥಿಕತೆಗೆ ಪೆಟ್ಟು ಬೀಳುವ ಕಾರಣ ಎಲ್ಲಾ ಕಡೆ ಲಾಕ್ಡೌನ್ ಜಾರಿ ಮಾಡುವ ಸಾಧ್ಯತೆ ಎಲ್ಲ. ಸೋಂಕು ಹೆಚ್ಚಾಗಿರುವ ರಾಜ್ಯಗಳಲ್ಲಿ ಬಿಗಿ ನಿಯಮಗಳನ್ನು ಕೈಗೊಳ್ಳಲಾಗುತ್ತಿದೆ. ಮತ್ತೆನಾದ್ರೂ ಪೂರ್ಣ ಲಾಕ್ಡೌನ್ ಆದ್ರೆ ಜನರ ಸಂಕಷ್ಟವಂತೂ ಹೇಳತೀರದಾಗಿರುತ್ತದೆ.