ಬೆಂಗಳೂರು: ಕೊರೋನಾ ಎರಡನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕಡಿವಾಣ ಹಾಕಲು ತಾಂತ್ರಿಕ ಸಮಿತಿ ಸಲಹೆ ನೀಡಿದೆ. ಇದರೊಂದಿಗೆ ಮತ್ತೆ ನೈಟ್ ಕರ್ಫ್ಯೂ ಜಾರಿ ಬಗ್ಗೆಯೂ ಚರ್ಚೆ ನಡೆದಿದೆ.
ಡಿಸೆಂಬರ್ 26 ರಿಂದ ಜನವರಿ 1 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಬೇಕು. ಉತ್ಸವ, ಸಮಾರಂಭ, ಕಾರ್ಯಕ್ರಮ ನಿರ್ಬಂಧಿಸಬೇಕು. ಮಾಸ್ಕ್ ಧರಿಸದವರಿಗೆ ಕೆಲವು ಗಂಟೆಗಳ ಕಾಲ ಜೈಲು ಶಿಕ್ಷೆ ನೀಡಬೇಕು. ಅದೇ ರೀತಿ ನಿಯಮ ಉಲ್ಲಂಘಿಸುವವರಿಗೆ ದಂಡದ ಮೊತ್ತ ಹೆಚ್ಚಿಸಬೇಕೆಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕ ಎದುರಾಗಿದೆ. ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಲಾಗಿದ್ದು, ಆರೋಗ್ಯ ಸೇವೆ, ಸೌಲಭ್ಯಗಳನ್ನು ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಇದ್ದಂತೆ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಸಿಎಂ, ಸಚಿವರು, ಹಿರಿಯ ಅಧಿಕಾರಿಗಳು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.