ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ ನಲ್ಲಿ ಮನ ಕಲಕುವ ಘಟನೆ ನಡೆದಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಾಯಿ ಮೃತಪಟ್ಟಿದ್ದು, ತಾಯಿಯ ಆಶೀರ್ವಾದಕ್ಕಾಗಿ ಮಗ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಮದುವೆ ಮೇ 21 ರಂದು ನಿಶ್ಚಯವಾಗಿತ್ತು. ಇದಕ್ಕಾಗಿ ಆತ ಅಮೆರಿಕಾದಿಂದ ಊರಿಗೆ ಬಂದಿದ್ದ 49 ವರ್ಷದ ತಾಯಿ ಕೊರೊನಾ ಸೋಂಕು ತಗುಲಿದ್ದರಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಿಸದೆ ರಾಕೇಶ್ ಮಾವ ಮೃತಪಟ್ಟಿದ್ದು, ಮದುವೆ ಮುಂದೂಡಲಾಗಿದೆ. ತಾಯಿ ಆಶೀರ್ವಾದ ಪಡೆದು ಮದುವೆಯಾಗಲು ಕಾಯುತ್ತಿದ್ದ ರಾಕೇಶ್ ಗೆ ಮತ್ತೆ ಶಾಕ್ ಆಗಿದೆ. ಆತನ ತಾಯಿಯೂ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.
ಮೃತದೇಹವನ್ನು ಊರಿಗೆ ತರಲಾಗಿದ್ದು, ಅಮ್ಮನ ಮೃತದೇಹದ ಎದುರಲ್ಲೇ ದುಃಖದ ಮಡುವಿನಲ್ಲಿ ರಾಕೇಶ್ ಮದುವೆಯಾಗಿದ್ದಾನೆ. ತಾಯಿಯ ಆಶೀರ್ವಾದ ಪಡೆದು ಮದುವೆಯಾಗಬೇಕೆಂದು ಅಮೆರಿಕದಿಂದ ಬಂದಿದ್ದ ರಾಕೇಶ್ ಮೃತದೇಹದ ಎದುರು ಮದುವೆಯಾಗಬೇಕಾದ ಪರಿಸ್ಥಿತಿ ಬಂದಿದೆ. ಈ ಮನಕಲಕುವ ಘಟನೆ ಕಂಡ ಗ್ರಾಮಸ್ಥರು ದೂರದಿಂದಲೇ ಕಣ್ಣೀರಿಟ್ಟಿದ್ದಾರೆ.