ಕೊರೋನಾ ಮೊದಲನೇ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಭರ್ಜರಿ ಕಮಾಯಿ ಮಾಡಿಕೊಂಡಿದ್ದ ಬಹುತೇಕ ಖಾಸಗಿ ಆಸ್ಪತ್ರೆಗಳು ಮೂರನೇ ಅಲೆಯಲ್ಲಿ ಭಾರಿ ನಿರಾಸೆ ಅನುಭವಿಸಿವೆ.
ಅಂದ ಹಾಗೆ, ಕೊರೋನಾ ರೂಪಾಂತರಿ ಒಮಿಕ್ರಾನ್ ತಜ್ಞರು ಮೊದಲೇ ನಿರೀಕ್ಷಿಸಿದಂತೆಯೇ ಅತಿವೇಗವಾಗಿ ಹರಡಿದೆ. ರಾಜ್ಯದ ಬಹುತೇಕ ಜನರಿಗೆ ಶೀತ, ಜ್ವರ, ಕೆಮ್ಮು, ಗಂಟಲು ನೋವು ಕಾಣಿಸಿಕೊಂಡಿದೆ. ಆದರೆ, ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿದ್ದ ತೀವ್ರತೆ ಈಗಿಲ್ಲ. ಜನರು ಕೂಡ ಕೊರೋನಾ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಬಹುತೇಕರು ಈಗಾಗಲೇ ಲಸಿಕೆ ಪಡೆದಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಂತೂ ತೀರಾ ಕಡಿಮೆಯಾಗಿದೆ. ಜನರಿಗೂ ಮೊದಲಿನಂತೆ ಕೊರೋನಾ ಭಯ ಇಲ್ಲವಾಗಿದೆ. ಹಾಗಾಗಿ, ಜ್ವರ, ಶೀತ, ಗಂಟಲು ನೋವಿಗೆ ದುಬಾರಿ ಖಾಸಗಿ ಆಸ್ಪತ್ರೆಗಳ ಬಾಗಿಲು ಬಡಿಯಲು ಹೋಗದ ಜನ ತಮಗೆ ಹತ್ತಿರವಿರುವ ಕ್ಲಿನಿಕ್, ಆಸ್ಪತ್ರೆ, ಮೆಡಿಕಲ್ ಶಾಪ್ ಗಳಲ್ಲಿ ತೋರಿಸಿ ಬೇಕಾದ ಮಾತ್ರೆಗಳನ್ನು ನುಂಗಿ, ಬಿಸಿನೀರು, ಬಿಸಿಯೂಟ ಉಂಡು ಹುಷಾರಾಗತೊಡಗಿದ್ದಾರೆ.
ಮೂರನೇ ಅಲೆ ಹೊತ್ತಲ್ಲಿ ಭಾರಿ ಹಣ ಮಾಡುವ ನಿರೀಕ್ಷೆಯೊಂದಿಗೆ ಆಕ್ಸಿಜನ್ ಸಿಲಿಂಡರ್, ಆಕ್ಸಿಜನ್ ಬೆಡ್, ಐಸಿಯು ಸೇರಿದಂತೆ ಎಲ್ಲವನ್ನು ಸಿದ್ಧಪಡಿಸಿಕೊಂಡಿದ್ದ ಕೆಲ ಖಾಸಗಿ ಆಸ್ಪತ್ರೆಗಳಿಗೆ ಗಿರಾಕಿಗಳೇ(ಸೋಂಕಿತರು, ರೋಗಿಗಳು) ಇಲ್ಲದಂತಾಗಿದೆ. ಜನ ಕೂಡ ಬುದ್ಧಿವಂತರಾಗಿದ್ದಾರೆ. ಮೊದಲಿನಂತೆ ಕೊರೋನಾ ಭಯ ಕೂಡ ಇಲ್ಲದಿರುವುದರಿಂದ ಸಮೀಪದ ಕ್ಲಿನಿಕ್ ಗಳಲ್ಲಿ ತೋರಿಸಿಕೊಂಡು ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆ ತೆಗೆದುಕೊಂಡು ಹುಷಾರಾಗುತ್ತಿದ್ದಾರೆ.
ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಏನು ಆಗಿಲ್ಲ. ಆದರೆ, ಮೊದಲಿನಂತೆ ಅಪಾಯವಂತೂ ಇಲ್ಲವೆನ್ನುವ ಭಾವನೆ ಜನರಲ್ಲಿದೆ. ಮೂರನೇ ಅಲೆ ಹೊತ್ತಲ್ಲಿ ಕೋವಿಡ್ ಬಗ್ಗೆ ಜನರಲ್ಲಿ ಭಯ ಕೂಡ ಇಲ್ಲವಾಗಿದೆ. ಕೊರೋನಾ ಅಂದ್ರೆ ಇಷ್ಟೇ ಎನ್ನುವಂತಾಗಿದ್ದು, ಇದರಿಂದಾಗಿ ಮೂರನೇ ಅಲೆಯಲ್ಲಿ ಭಾರಿ ಹಣ ಮಾಡುವ ಲೆಕ್ಕಾಚಾರದಲ್ಲಿದ್ದ ಬಹುತೇಕ ಖಾಸಗಿ ಆಸ್ಪತ್ರೆಗಳು ಭಾರಿ ನಿರಾಸೆ ಅನುಭವಿಸಿವೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.