ಬೆಂಗಳೂರು: ಇಂಗ್ಲೆಂಡ್ ಸೇರಿದಂತೆ ಮೂರು ದೇಶಗಳಲ್ಲಿ ಕೊರೋನಾ ಹೊಸ ಪ್ರಭೇದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ಬಂದವರು ಕ್ವಾರಂಟೈನ್ ನಲ್ಲಿ ಇರಬೇಕು. ಹೊಸ ಕೊರೋನಾ ವೈರಸ್ ರೋಗ ಲಕ್ಷಣದ ಬದಲಾವಣೆ ಇಲ್ಲ. ತೀವ್ರತೆಯೂ ಇಲ್ಲ. ಆದರೆ ಹೊಸ ವೈರಸ್ ಹರಡುವ ಪ್ರಮಾಣ ಅತಿವೇಗವಾಗಿದೆ. ಎಲ್ಲರೂ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆದೇಶ ಪಾಲಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ನಾಗರಿಕ ವಿಮಾನಯಾನ ಇಲಾಖೆಯಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಇಂಗ್ಲೆಂಡ್ ನಿಂದ ಬೆಂಗಳೂರಿಗೆ 138 ಜನ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೇ ಬಂದಿದ್ದು, ನಿಗಾ ವಹಿಸಲಾಗಿದೆ. ರಾಜ್ಯದಲ್ಲಿ ಹೊಸ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿಂದು 772 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1261 ಜನ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ. 14001 ಸಕ್ರಿಯ ಪ್ರಕರಣಗಳಿವೆ.