ಬೆಂಗಳೂರು: ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಬಂದ 138 ಜನರಿಗೆ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಇರಲಿಲ್ಲ. ಇಂಗ್ಲೆಂಡ್ ನಲ್ಲಿ ರೂಪಾಂತರ ಹೊಂದಿದ ಹೊಸ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇಂದು ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಏರ್ ಇಂಡಿಯಾ ವಿಮಾನದಲ್ಲಿ 246 ಜನ ಬಂದಿದ್ದು, ಅವರಲ್ಲಿ 89 ಜನರಿಗೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇರಲಿಲ್ಲ. ಬ್ರಿಟಿಷ್ ಏರ್ ಲೈನ್ಸ್ ನಲ್ಲಿ 291 ಜನ ಬಂದಿದ್ದು, ಅವರಲ್ಲಿ 49 ಜನರಿಗೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇರಲಿಲ್ಲ. ಒಟ್ಟು 138 ಜನ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೆ ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅವರೆಲ್ಲರೂ ಒಂದು ವಾರ ಮನೆಯಲ್ಲಿ ಇರಲು ಸೂಚಿಸಿ ನಿಗಾ ವಹಿಸಲಾಗುವುದು. ಇಂಗ್ಲೆಂಡ್, ಡೆನ್ಮಾರ್ಕ್, ನೆದರ್ಲ್ಯಾಂಡ್ ನಲ್ಲಿ ರೂಪಾಂತರಗೊಂಡ ಹೊಸ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತ ಸರ್ಕಾರ ಇಂಗ್ಲೆಂಡ್ ವಿಮಾನಗಳಿಗೆ ನಿರ್ಬಂಧ ಹೇರಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಇಂಗ್ಲೆಂಡ್ ಸೇರಿದಂತೆ ಬೇರೆ ದೇಶದಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು. ಅಂತಹವರು RTPCR ಟೆಸ್ಟ್ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ನಿಗಾವಹಿಸಲಿದೆ. ಇನ್ನು ಜನ ಮಾಸ್ಕ್ ಧರಿಸದೇ ಓಡಾಡುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸಬೇಕು. ಕ್ರಿಸ್ಮಸ್, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೋಟೆಲ್ ಮಾಲೀಕರು, ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.