ಚೀನಾದಲ್ಲಿ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ಕೊರೊನಾ ವೈರಸ್ ಸಕ್ರಿಯವಾಗಬಹುದು ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ. ಕಾರಣ ಚೀನಾದಲ್ಲಿ ಕೊರೋನಾ ಸಬ್‌ವೇರಿಯಂಟ್ ಎಕ್ಸ್‌ಬಿಬಿಯ ತಳಿಗಳು ಕಂಡುಬಂದಿವೆ. ಹಾಗಾಗಿ ಅಲ್ಲಿನ ಸರ್ಕಾರ ಮತ್ತೆ ಕೋವಿಡ್ ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಆದ್ಯತೆಯ ಆಧಾರದ ಮೇಲೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಬೇಕು ಎಂದು ಸರ್ಕಾರ ಹೇಳಿದೆ.
ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, XBB ಸಾಕಷ್ಟು ಪ್ರಬಲವಾಗಿದ್ದು, ಹೆಚ್ಚಿನ ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ವಯಸ್ಸಾದವರಿಗೆ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಅಪಾಯಕಾರಿ. ಕಳೆದ ಬಾರಿ ಚೀನಾದ ಅನೇಕ ವೃದ್ಧರು ವ್ಯಾಕ್ಸಿನ್ ಹಾಕಿಸಿಕೊಂಡಿರಲಿಲ್ಲ. ಹಾಗಾಗಿ ವೈರಸ್‌ನ ಹೊಸ ಅಲೆ ತೀವ್ರ ಸ್ವರೂಪ ಪಡೆಯುವ ಆತಂಕವಿದೆ. ಬೀಜಿಂಗ್ ಶೂನ್ಯ-ಕೋವಿಡ್ ನೀತಿಯನ್ನು ಕೈಬಿಟ್ಟ ನಂತರ ಚೀನಾದಲ್ಲಿ ಕೊರೊನಾ ಆರ್ಭಟ ಜೋರಾಗಿತ್ತು.
NHC ಪ್ರಕಾರ, ಹೆಚ್ಚು ಸಾಂಕ್ರಾಮಿಕವಾಗಿರೋ XBB ಸಬ್‌ವೇರಿಯಂಟ್ ವಸಂತಕಾಲದ ವೇಳೆಗೆ ದೇಶದಲ್ಲಿ ವೈರಸ್‌ನ ಪ್ರಬಲ ರೂಪವಾಗಿ ಹೊರಹೊಮ್ಮಿತು. XBB ಯ ವಿರುದ್ಧ ಹೋರಾಡಲು ದುರ್ಬಲವಾದ ತಟಸ್ಥಗೊಳಿಸುವ ಸೀರಮ್ ಪ್ರತಿಕಾಯಗಳನ್ನು ಹೊಂದಿರುವ ಕಾರಣ ಚೀನೀ ಜನಸಂಖ್ಯೆಯು ದೊಡ್ಡ ಪ್ರಮಾಣದ ಸೋಂಕಿಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗಾಗಿ ರಾಷ್ಟ್ರವ್ಯಾಪಿ 1.3 ಶತಕೋಟಿಗೂ ಹೆಚ್ಚು ಜನರನ್ನು ಚುಚ್ಚುಮದ್ದು ಪಡೆಯಲು ಪ್ರೇರೇಪಿಸಲಾಗುತ್ತಿದೆ. ವಯೋವೃದ್ಧರಲ್ಲಿ ಈಗಾಗ್ಲೇ ಕೇವಲ 70 ಪ್ರತಿಶತದಷ್ಟು ಜನರು COVID-19 ಲಸಿಕೆಯ ಎಲ್ಲಾ ಮೂರು ಡೋಸ್‌ಗಳನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕೇವಲ ಶೇ.40ರಷ್ಟು ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ.