alex Certify ಕೋವಿಡ್ ನಿಂದ ಮೃತಪಟ್ಟವರ ಬಿಪಿಎಲ್ ಕುಟುಂಬಕ್ಕೆ 1.50 ಲಕ್ಷ ರೂ., ಇತರೆಯವರಿಗೆ 50 ಸಾವಿರ ರೂ. ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ನಿಂದ ಮೃತಪಟ್ಟವರ ಬಿಪಿಎಲ್ ಕುಟುಂಬಕ್ಕೆ 1.50 ಲಕ್ಷ ರೂ., ಇತರೆಯವರಿಗೆ 50 ಸಾವಿರ ರೂ. ಪರಿಹಾರ

ಕಲಬುರಗಿ: ಕೋವಿಡ್-19 ವೈರಾಣು ಸೋಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡುವ ಯೋಜನೆಯಡಿ ಕಲಬುರಗಿ ಜಿಲ್ಲೆಯ ಅರ್ಹ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳ ವಾರಸುದಾರರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರು ಜಿಲ್ಲೆಯ ಸಂಬಂಧಪಟ್ಟ ಅಯಾ ತಾಲೂಕುಗಳ ಕಚೇರಿ, ನಾಡ ಕಚೇರಿಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ನಿಗದಿಪಡಿಸಿದ ನಮೂನೆ-1, ನಮೂನೆ-2 ಹಾಗೂ ನಮೂನೆ-3 ರಲ್ಲಿ ಮೃತವ್ಯಕ್ತಿ ಮತ್ತು ಅರ್ಜಿದಾರರ ವಿವರಗಳೊಂದಿಗೆ ಕೆಳಕಂಡ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಮೃತ ವ್ಯಕ್ತಿಯ ಪಾಸಿಟಿವ್ ವರದಿ, ಕೋವಿಡ್ ರೋಗಿ ಸಂಖ್ಯೆ-ಪಿ ನಂಬರ್, ಮರಣ ಪ್ರಮಾಣಪತ್ರ ಅಥವಾ ಮರಣ ಕಾರಣ ಪ್ರಮಾಣಪತ್ರ, ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ ಲಗತ್ತಿಸಬೇಕು.

ಇದಲ್ಲದೇ ಅರ್ಜಿದಾರರ ಆಧಾರ್ ಪ್ರತಿ, ಬಿ.ಪಿ.ಎಲ್. ಪಡಿತರ ಚೀಟಿ, ಬ್ಯಾಂಕ್, ಅಂಚೆ ಖಾತೆ, ಪಾಸ್‍ಬುಕ್ ಪ್ರತಿ, ಅರ್ಜಿದಾರರ ಸ್ವಯಂ ಘೋಷಣೆ, ಮೃತ ವ್ಯಕ್ತಿಯ ಪತಿ, ಪತ್ನಿಯನ್ನು ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು.

ರಾಜ್ಯ ಸರ್ಕಾರವು ಘೋಷಿಸಿದಂತೆ ಕೋವಿಡ್‍ದಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಒಬ್ಬ ಕಾನೂನು ಬದ್ಧ ವಾರಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂ., ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 50 ಸಾವಿರ ರೂ. ಸೇರಿದಂತೆ ಒಟ್ಟು 1.50 ಲಕ್ಷ ರೂ. ಪಾವತಿಸಲು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕೋವಿಡ್‍ ನಿಂದ ಮೃತಪಟ್ಟ ಇತರ ಎಲ್ಲಾ ಪ್ರಕರಣಗಳಲ್ಲಿ ಕುಟುಂಬದ ವಾರಸುದಾರರಿಗೆ 50 ಸಾವಿರ ಪರಿಹಾರ ಮೊತ್ತವನ್ನು ಪಾವತಿಸಲು ಅನುಮತಿ ನೀಡಿ ಸರ್ಕಾರ ಆದೇಶಿಸಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...