alex Certify ರಾಜ್ಯದಲ್ಲಿ ಆಮ್ಲಜನಕ, ರೆಮ್ ಡೆಸಿವಿರ್ ಕೃತಕ ಅಭಾವ, ಸೋಂಕಿತರ ಸಂಖ್ಯೆಗೂ- ಪೂರೈಕೆ ಅಗ್ತಿರುವ ಆಕ್ಸಿಜನ್, ಔಷಧಕ್ಕೂ ತಾಳಮೇಳವಿಲ್ಲ: ಡಿಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಆಮ್ಲಜನಕ, ರೆಮ್ ಡೆಸಿವಿರ್ ಕೃತಕ ಅಭಾವ, ಸೋಂಕಿತರ ಸಂಖ್ಯೆಗೂ- ಪೂರೈಕೆ ಅಗ್ತಿರುವ ಆಕ್ಸಿಜನ್, ಔಷಧಕ್ಕೂ ತಾಳಮೇಳವಿಲ್ಲ: ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್‌ ಆಗಲಿ ಅಥವಾ ರೆಮ್ ಡೆಸಿವಿರ್ ಇಂಜೆಕ್ಷನ್ ಕೊರತೆ ಇಲ್ಲ. ಜನರಿಗೆ ತೊಂದರೆ ಕೊಡಲು ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯಾರೋ ಹಣದಾಸೆಗೆ ಬಿದ್ದು ಕೃತಕ ಅಭಾವ ಸೃಷ್ಟಿ ಮಾಡುತ್ತಿರುವ ಅನುಮಾನವಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸಂಶಯ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಶನಿವಾರ ಅವರು ರಾಮನಗರ ಜಿಲ್ಲೆಯ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ತಜ್ಞರ ಜತೆ ವರ್ಚುಯಲ್‌ ಮೂಲಕ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ಸ್ವಲ್ಪ ಮಟ್ಟಿಗೆ ಅಲ್ಲಲ್ಲಿ ಲಾಜಿಸ್ಟಿಕ್ ಸಮಸ್ಯೆ ಬಿಟ್ಟರೆ ರಾಜ್ಯದಲ್ಲಿ ಆಮ್ಲಜನಕದ ಕೊರತೆ ಆಗಿಲ್ಲ. ಮೊದಲನೇ ಅಲೆ ಬಂದಾಗ ಎಲ್ಲ ಆಸ್ಪತ್ರೆಗಳ ಬೆಡ್‌ಗಳು ತುಂಬಿದ್ದವು. ಈಗಲೂ ತುಂಬಿವೆ. ಹಾಸಿಗೆಗಳ ಸಂಖ್ಯೆಯಲ್ಲೂ ವ್ಯತ್ಯಯವೇನೂ ಆಗಿಲ್ಲ. ಆಗ ದಿನಕ್ಕೆ 100 ರಿಂದ 150 ಮೆಟ್ರಿಕ್‌ ಟನ್‌ ಆಮ್ಲಜನಕ ಬಳಕೆಯಾಗಿತ್ತು. ಈಗ 400ರಿಂದ 417 ಮೆಟ್ರಿಕ್‌ ಟನ್‌ವರೆಗೂ ನೀಡಲಾಗುತ್ತಿದೆ. ಕೊರತೆ ಯಾಕೆ ಆಗುತ್ತಿದೆಯೋ ಅರ್ಥವಾಗುತ್ತಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಇದರ ಮೇಲೆ ಸರಕಾರ ಹದ್ದಿನ ಕಣ್ಣಿಟ್ಟಿದೆ ಎಂದವರು ಹೇಳಿದರು.

ಎಲ್ಲಿಯೂ ರೆಮ್ ಡೆಸಿವಿರ್‌ ಕೊರತೆಯೂ ಆಗುತ್ತಿಲ್ಲ. ದಿನಕ್ಕೆ 15 ರಿಂದ 20 ಸಾವಿರ ವೇಲ್‌ಗಳು ನಮಗೆ ಪೂರೈಕೆ ಆಗುತ್ತಿವೆ. ಅಷ್ಟೂ ರಾಜ್ಯದಲ್ಲೇ ತಯಾರಾಗುತ್ತಿವೆ. ಹಾಗಾದರೆ, ದಿನಕ್ಕೆ ಹೊಸದಾಗಿ ದಾಖಲಾಗುತ್ತಿರುವ ಸೋಂಕಿತರೆಷ್ಟು? ದಿನಕ್ಕೆ 15 ಸಾವಿರ ಸೋಂಕಿತರು ದಾಖಲಾಗುತ್ತಿದ್ದಾರಾ ಹೇಗೆ? ಆಸ್ಪತ್ರೆಗಳಿಗೆ ಬರುತ್ತಿರುವ ರೆಮ್ ಡೆಸಿವಿರ್‌ ಎಲ್ಲಿ ಹೋಗುತ್ತಿದೆ? ಒಂದಕ್ಕೂ ತಾಳ-ಮೇಳವಿಲ್ಲ. ಯಾರೋ ಕಿಡಿಗೇಡಿಗಳು ಹಣದಾಸೆಗೆ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಕೊರತೆ ಎನ್ನುವ ಭೀತಿಯ ಉಲ್ಬಣ

ಈ ಕೃತಕ ಅಭಾವಕ್ಕೆ ಯಾರು ಕಾರಣರು? ಎಲ್ಲಿ ತಪ್ಪಾಗುತ್ತಿದೆ? ಎಂಬುದನ್ನು ನೋಡೆಲ್‌ ಅಧಿಕಾರಿಗಳು ಪತ್ತೆ ಹಚ್ಚಬೇಕು. ಕಿಡಿಗೇಡಿಗಳು ಸೋಂಕಿಗಿಂತ ಆಮ್ಲಜನಕ ಸಿಗುತ್ತಿಲ್ಲ, ರೆಮ್ ಡೆಸಿವಿರ್ ಸಿಗುತ್ತಿಲ್ಲ ಎಂಬ ಭೀತಿಯನ್ನೇ ಉಲ್ಬಣಗೊಳಿಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಗಳು ಮುನ್ನೆಚ್ಚರಿಕೆಯಿಂದ ಕೇಂದ್ರ ಸರಕಾರಕ್ಕೆ ಹೆಚ್ಚಿನ ಆಕ್ಸಿಜನ್‌ಗೆ ಬೇಡಿಕೆ ಇಟ್ಟಿದ್ದಾರೆ. ಇನ್ನು ನಮ್ಮ ರಾಜ್ಯದಲ್ಲೂ 800 ಮೆಟ್ರಿಕ್‌ ಟನ್‌ ಆಮ್ಲಜನಕ ಉತ್ಪಾದನೆ ಆಗುತ್ತಿದೆ. ಆದರೆ, ಇದ್ದಕ್ಕಿದಂತೆ ಗಾಬರಿಯಾಗುವ ರೀತಿಯಲ್ಲಿ ಆಮ್ಲಜನಕ ಬಳಕೆಯಾಗುತ್ತಿದೆ ಅನ್ನುವ ಮಾತು ಕೇಳಿಬರುತ್ತಿದೆ. ಹೊಸ ಬೆಡ್‌ಗಳೇ ಮಾಡಿಲ್ಲ ಎಂದ ಮೇಲೆ ಪೂರೈಕೆ ಆಗುತ್ತಿರುವ ಆಮ್ಲಜನಕವೆಲ್ಲ ಎಲ್ಲಿಗೆ ಹೋಗುತ್ತಿದೆ? ರಾಜ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗುತ್ತಿದೆ? ಎಷ್ಟು ಬಳಕೆ ಆಗುತ್ತಿದೆ? ಎಂಬುದರ ಆಡಿಟ್ ಮಾಡಿಸಲಾಗುವುದು  ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಆರಂಭದಲ್ಲೇ ಚಿಕಿತ್ಸೆ ಕೊಡಬೇಕು

ಸೋಂಕಿತರಿಗೆ ಚಿಕಿತ್ಸೆ ಕೊಡುವ ಕಾರ್ಯತಂತ್ರವನ್ನು ಬದಲಿಸಬೇಕಿದೆ. ನಿಧಾನವಾಗಿ ಪರೀಕ್ಷೆ ಮಾಡುವ, 45-70 ಗಂಟೆಗಳಲ್ಲಿ ರಿಸಲ್ಟ್‌ ಕೊಡುವ ಹಾಗೂ ವಿಳಂಬವಾಗಿ ಚಿಕಿತ್ಸೆ ಆರಂಭಿಸುವ ಪರಿಸ್ಥಿತಿಯಲ್ಲಿ ನಾವಿಲ್ಲ. ಈಗ ಪರಿಸ್ಥಿತಿ ನಮ್ಮ ಕೈಮೀರಿದೆ. ಒಂದೇ ದಿನದಲ್ಲಿ ಪರೀಕ್ಷೆ, ಫಲಿತಾಂಶ ನೀಡುವುದು, ಚಿಕಿತ್ಸೆ ಆರಂಭಿಸುವುದು ಅಗಬೇಕು. ಸೋಂಕು ಉಲ್ಬಣ ಆಗವುದಕ್ಕೆ ಮೊದಲು ಚಿಕಿತ್ಸೆ ಕೊಡದಿದ್ದರೆ ಪರಿಸ್ಥಿತಿ ಕಷ್ಟ ಆಗುತ್ತದೆ ಎಂದು ಅವರು ಹೇಳಿದರು.

24 ಗಂಟೆ ಒಳಗೆ ರಿಸಲ್ಟ್‌ ಕೊಡಬೇಕು

ಯಾವುದೇ ಕೋವಿಡ್‌ ಲ್ಯಾಬ್‌ಗಳು ಸ್ಯಾಂಪಲ್‌ ಸ್ವೀಕರಿಸಿದ 24 ಗಂಟೆ ಒಳಗೆ ರಿಸಲ್ಟ್‌ ಕೊಡಬೇಕು. ಆ ಬಗ್ಗೆ ಸರ್ಕಾರವೂ ಆದೇಶ ನೀಡಿದೆ. ನ್ಯಾಯಾಲಯ ಕೂಡ ಸ್ಪಷ್ಟವಾಗಿ ಆದೇಶ ಕೊಟ್ಟಿದೆ. ಹೀಗಾಗಿ ರಿಸಲ್ಟ್‌ ಅನ್ನು ಯಾವ ಕಾರಣಕ್ಕೂ ತಡ ಮಾಡುವಂತಿಲ್ಲ. ಅಷ್ಟೇ ಅಲ್ಲ, ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಿನಂಥ ನಗರದಲ್ಲಿ 6 ರಿಂದ 7 ಗಂಟೆ ಒಳಗೆ ಫಲಿತಾಂಶ ಕೊಡಬೇಕು ಎಂದು ಹೇಳಿದ್ದೇವೆ. ಇದರಲ್ಲಿ ಯಾವ ಅಧಿಕಾರಿಯೂ ನಿರ್ಲಕ್ಷ್ಯ ಮಾಡುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ದಿನ ಬ್ಯಾಚ್‌ ಪ್ರಕಾರ ಸ್ಯಾಂಪಲ್‌ಗಳು ಲ್ಯಾಬ್‌ಗೆ ಹೋಗಬೇಕು, ಪ್ರತಿ ಮೂರು ಗಂಟೆಗೊಮ್ಮೆ ರಿಸಲ್ಟ್‌ ಹೊರಗೆ ಬರಬೇಕು. ಬರೀ ಹೇಳಿಕೆಗಳಿಂದ ಈ ಸಮಸ್ಯೆ ಬಗೆಹರಿಯಲ್ಲ. ಸಮಸ್ಯೆಯ ಮೂಲಕ್ಕೆ ಹೋಗಬೇಕು. ಸಮಸ್ಯೆ ಉಲ್ಬಣ ಆದ ಮೇಲೆ ಚಿಕಿತ್ಸೆ ಕೊಟ್ಟು ಲಾಭವೇನು? ರೈಲು ಹೋದ ಮೇಲೆ ಟಿಕೆಟ್‌ ತೆಗೆದುಕೊಂಡರೆ ಲಾಭವೇನು ಎಂದು ಅವರು ಖಾರವಾಗಿ ಪ್ರಶ್ನಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...