ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದ್ದು, ಎರಡನೇ ಅಲೆ ಆತಂಕ ಎದುರಾಗಿದೆ.
ತಜ್ಞರ ತಂಡದಿಂದ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಒಂದು ವಾರ ಕಾದು ನೋಡುವ ತಂತ್ರಕ್ಕೆ ಸರ್ಕಾರ ಮುಂದಾಗಿದ್ದು, ನಂತರ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
6 ಜಿಲ್ಲೆಗಳಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದೆ. ಸೋಮವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಎರಡನೆಯ ಮುನ್ಸೂಚನೆ ಎಂದು ಚರ್ಚೆ ನಡೆದಿದೆ.
ಕಳೆದ 14 ದಿನಗಳ ಅವಧಿಯಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ 1 ವಾರದ ನಂತರವೂ ಇದೇ ಪರಿಸ್ಥಿತಿ ಮುಂದುವರೆದರೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ಅತಿಹೆಚ್ಚು ಸೋಂಕಿತರು ಇರುವ ಕರೆ ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ, ಶಾಲಾ –ಕಾಲೇಜಿಗೆ ರಜೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಧರಿಸದವರಿಗೆ ದಂಡ, ಸಭೆ ಸಮಾರಂಭಗಳಿಗೆ ನಿರ್ಬಂಧ, ಕೊರೋನಾ ಪರೀಕ್ಷೆ ಹೆಚ್ಚಳ, ಲಸಿಕೆ ನೀಡಿಕೆ ಪ್ರಕ್ರಿಯೆ ಚುರುಕುಗೊಳಿಸುವುದು ಸೇರಿದಂತೆ ಹತ್ತು ಹಲವು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.