ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲು ಕೇಂದ್ರ ಸರ್ಕಾರ 30,000 ಕೋರ್ಬಿವ್ಯಾಕ್ಸ್ ಲಸಿಕೆಗಳನ್ನು ಕಳುಹಿಸಿದೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಜಿಲ್ಲೆಗಳಿಗೆ ಕೋರ್ಬಿವ್ಯಾಕ್ಸ್ ಲಸಿಕೆಗಳನ್ನು ಹಂಚಿಕೆ ಮಾಡಲಾಗಿದೆ. ಲಸಿಕೆ ಪಡೆದು ಆರು ತಿಂಗಳು ಅಥವಾ 26 ವಾರಗಳು ಪೂರೈಸಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯದ 60 ವರ್ಷ ಮೇಲ್ಪಟ್ಟವರಿಗೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಕೋವಿನ್ ಪೋರ್ಟಲ್ ಮಾಹಿತಿ ಆಧರಿಸಿ ಲಸಿಕೆ ನೀಡುವಂತೆ ಜಿಲ್ಲಾ ಮುಖ್ಯ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.
ಕೋವಿಶೀಲ್ದ್ ಅಥವಾ ಕೊವ್ಯಾಕ್ಸಿನ್ ಎರಡನೇ ಲಸಿಕೆ ಪಡೆದವರಿಗೆ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್ ಕೋರ್ಬಿವ್ಯಾಕ್ಸ್ ಸರಬರಾಜು ಮಾಡಿದೆ. ಇದನ್ನು ಮುನ್ನೆಚ್ಚರಿಕೆಯಾಗಿ ನೀಡಬಹುದಾಗಿದೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನಂತೆ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಇದನ್ನು ನೀಡಬಹುದಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಲಸಿಕೆ ಪಡೆಯಬಹುದಾಗಿದೆ. ಮಾರ್ಗಸೂಚಿ ಅನ್ವಯ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.