ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್ ನಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಯಾಗಿದೆ. ಆರೋಪಿ ಅಫ್ತಾಬ್ ನ ಫ್ಲಾಟ್ನಿಂದ ಭಾರವಾದ ಮತ್ತು ಚೂಪಾದ ಕತ್ತರಿಸುವ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . ಶ್ರದ್ಧಾಳ ದೇಹವನ್ನು ಕತ್ತರಿಸಲು ಈ ಉಪಕರಣಗಳನ್ನು ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆಫ್ತಾಬ್ ಮತ್ತು ಶ್ರದ್ಧಾ ಕೊಲೆಯ ದಿನದಂದು ಧರಿಸಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಇನ್ನೂ ಇರುತ್ತವೆ ಎಂದು ವಿಧಿವಿಜ್ಞಾನ ತಂಡ ಶಂಕಿಸಿದ್ದು ಇಬ್ಬರ ಬಟ್ಟೆಗಾಗಿ ಹುಡುಕಾಟ ನಡೆಯುತ್ತಿದೆ.
ಈ ನಡುವೆ ಆರೋಪಿ ಅಫ್ತಾಬ್ ವಿರುದ್ದ ಸಾರ್ವಜನಿಕರ ಆಕ್ರೋಶ ತೀವ್ರವಾಗುತ್ತಿದೆ. ಹೀಗಾಗಿ ಈತನ ಸುರಕ್ಷತೆಗೆ ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರು ನಿರಂತರವಾಗಿ ಪೂನಾವಾಲಾನ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಮತ್ತು ಅವನನ್ನು ದಕ್ಷಿಣ ದೆಹಲಿಯ ವಿವಿಧ ಪೊಲೀಸ್ ಠಾಣೆಗಳು ಮತ್ತು ಇತರ ಸ್ಥಳಗಳಲ್ಲಿ ಇರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಶ್ರದ್ಧಾಳ ಛಿದ್ರಗೊಂಡ ದೇಹ, ಕೊಲೆಯ ಆಯುಧ, ಇನ್ನಿತರೆ ಪುರಾವೆಗಳ ಸಂಗ್ರಹದಲ್ಲಿ ತನಿಖಾ ತಂಡಕ್ಕೆ ಸುಳಿವು ನೀಡಲು ಕೊಲೆ ಆರೋಪಿಯನ್ನು ಬೀದಿಗಳಲ್ಲಿ ಅಥವಾ ಕಾಡಿನಲ್ಲಿ ಕರೆದೊಯ್ಯುವಾಗ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ರಾತ್ರಿಯ ಸಮಯದಲ್ಲಿ ಅಫ್ತಾಬ್, ಲಾಕ್-ಅಪ್ ಹೊರಗೆ ಜಾಗರೂಕರಾಗಿರಲು ಮತ್ತು ಬಂಧನದಲ್ಲಿರುವ ಅವನ ಚಟುವಟಿಕೆಗಳ ಮೇಲೆ ನಿಗಾ ಇಡಲು ಕೆಲವು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಫ್ತಾಬ್ ಪೂನಾವಾಲಾ ಮೇ 18 ರಂದು ತನ್ನ ಲಿವ್ ಇನ್ ರಿಲೇಷನ್ ಶಿಪ್ ಸಂಗಾತಿ ಶ್ರದ್ಧಾ ವಾಲ್ಕರ್ (27) ಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿದ್ದನು. ಪ್ರತಿದಿನ ದೇಹದ ಎರಡೆರಡು ತುಂಡುಗಳನ್ನು ಮನೆ ಸಮೀಪದ ಕಾಡಿನಲ್ಲಿ ಎಸೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.