ಮೊಬೈಲ್ ಶಾಪ್ ನಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಯೊಬ್ಬ ಶೋಕಿ ಮಾಡಲು ತನ್ನ ಬಳಿ ಇದ್ದ ಗನ್ ಹೊರ ತೆಗೆದಿದ್ದು, ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಂಜಾಬಿನ ಅಮೃತಸರದಲ್ಲಿ ನಡೆದಿದೆ.
ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೊಬೈಲ್ ಶಾಪಿಗೆ ಬರುವ ಪೊಲೀಸ್ ಅಧಿಕಾರಿ ಮೊದಲಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾನೆ. ನಂತರ ತನ್ನ ಬಳಿ ಇದ್ದ ಗನ್ ತೆಗೆದು ಮೇಜಿನ ಮೇಲೆ ಇರಿಸಿ ಅದರ ಕುರಿತು ಹೇಳುತ್ತಿರುವಂತೆ ಕಾಣುತ್ತದೆ.
ಈ ಸಂದರ್ಭದಲ್ಲಿ ಮತ್ತೊಬ್ಬರು ನೋಡುವ ಸಲುವಾಗಿ ಗನ್ ತೆಗೆದುಕೊಂಡಿದ್ದು, ಈ ವೇಳೆ ಅಧಿಕಾರಿ ಆತನಿಂದ ಎಳೆದುಕೊಂಡಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದು, ಮೊಬೈಲ್ ಶಾಪ್ ನ ಹುಡುಗ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಯನ್ನು ಅಮಾನತುಗೊಳಿಸಿದ್ದು, ವಿಚಾರಣೆಗೆ ಆದೇಶಿಸಿದ್ದಾರೆ. ಅಲ್ಲದೆ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.