ಹೆರಿಗೆ ರಜೆ ಮೇಲೆ ತೆರಳುತ್ತಿದ್ದ ಮಹಿಳಾ ಎಸ್ಐ ಒಬ್ಬರಿಗೆ ಅವರ ಸಿಬ್ಬಂದಿ ಠಾಣೆಯಲ್ಲಿಯೇ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದು, ಅಚ್ಚರಿಯ ಈ ಸ್ವಾಗತ ಕಂಡು ಅಧಿಕಾರಿ ಭಾವುಕರಾಗಿದ್ದಾರೆ. ಇಂಥದೊಂದು ಘಟನೆ ಮಧ್ಯಪ್ರದೇಶದ ಭೋಪಾಲ್ ಪೊಲೀಸ್ ಠಾಣೆ ಒಂದರಲ್ಲಿ ನಡೆದಿದೆ.
ಮೂಲತಃ ಗ್ವಾಲಿಯರ್ ನವರಾದ ಕರಿಷ್ಮಾ ರಾಜಾವತ್ ಭೋಪಾಲ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹೆರಿಗೆ ರಜೆ ಮೇಲೆ ಊರಿಗೆ ತೆರಳುತ್ತಿದ್ದರು. ಆದರೆ ಅದಕ್ಕೂ ಮುನ್ನ ಅವರು ಠಾಣೆಗೆ ಬಂದಾಗ ಅಚ್ಚರಿ ಕಾದಿತ್ತು. ಹೂವಿನ ತೋರಣ, ಬಲೂನುಗಳಿಂದ ಠಾಣೆಯನ್ನು ಸಿಂಗರಿಸಿದ್ದ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು.
ಪೊಲೀಸ್ ಪೇದೆ ಪ್ರದೀಪ್ ಶರ್ಮಾ ರಜಾವತ್ ಸಹೋದರನ ಕಾರ್ಯವನ್ನು ನಿರ್ವಹಿಸಿದರೆ, ಮತ್ತೊಬ್ಬ ಮಹಿಳಾ ಪೊಲೀಸ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಠಾಣೆಯ 25 ಮಹಿಳಾ ಹಾಗೂ 13 ಪುರುಷ ಸಿಬ್ಬಂದಿ ಕುಟುಂಬಸ್ಥರಂತೆ ಈ ಕಾರ್ಯವನ್ನು ನೆರವೇರಿಸಿದ್ದು, ಠಾಣೆಗೆ ದೂರು ನೀಡಲು ಬಂದವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.