ಮಹಾರಾಷ್ಟ್ರದ ಮಾಜಿ ಮಂತ್ರಿ ಅನಿಲ್ ದೇಶ್‌ಮುಖ್ ಕಳಂಕಿತರಾಗಿರುವ ಪ್ರಕರಣವೊಂದರ ಸಿಬಿಐ ವಿಚಾರಣೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡಲು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಒಬ್ಬರು ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಐಫೋನ್ 12 ಪ್ರೋ ಸ್ಮಾರ್ಟ್‌ಫೋನ್‌ನ ಲಂಚದ ಆಮಿಷಕ್ಕೆ ಒಳಗಾಗಿದ್ದಾರೆ.
ದೇಶ್‌ಮುಖ್ ವಿರುದ್ಧದ ಪ್ರಕರಣ ವಿಚಾರಣೆಯನ್ನು ಹಳ್ಳ ಹಿಡಿಸಿದ ಸಂಬಂಧ ಸಬ್-ಇನ್ಸ್‌ಪೆಕ್ಟರ್ ಅಭಿಷೇಕ್ ತಿವಾರಿ ಹಾಗೂ ಮಾಜಿ ಸಚಿವರ ವಕೀಲರಾದ ಆನಂದ್ ದಗಾರನ್ನು ಸಿಬಿಐ ಬಂಧಿಸಿದೆ. ಮುಂಬೈ ಪೊಲೀಸ್ ನ ಮಾಜಿ ಅಧಿಕಾರಿ ಪರಂಬೀರ್ ಸಿಂಗ್ ಅವರು ಅನಿಲ್ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರದ ಆಪಾದನೆ ಮಾಡಿರುವ ವಿಚಾರವು ಸಿಬಿಐ ಮೆಟ್ಟಿಲೇರಿದೆ.
500 ರೂ. ಗೆ ಐಫೋನ್ ನಕಲಿ ಬ್ಯಾಕ್ ಕೇಸ್ ಮಾರುತ್ತಿದ್ದವರು ಅರೆಸ್ಟ್
“28.06.2021 ರಂದು ಪ್ರಕರಣದ ವಿಚಾರಣೆ ಸಂಬಂಧ ಅಭಿಷೇಕ್ ತಿವಾರಿ ಅವರು ಪುಣೆಗೆ ಹೋಗಿದ್ದರು. ಆ ವೇಳೆ ವಕೀಲರಾದ ಆನಂದ್ ದಗಾ ಅವರು ಅಭಿಷೇಕ್ ತಿವಾರಿಗೆ ಐಪೋನ್ 12 ಪ್ರೋ ಅನ್ನು ಅಕ್ರಮ ಉಡುಗೊರೆಯಾಗಿ, ತನಿಖೆಯ ವಿವರಗಳನ್ನು ಲೀಕ್ ಮಾಡಿದ್ದಕ್ಕೆ, ಕೈಗೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ” ಎಂದು ಸಿಬಿಐ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ದಾಖಲಿಸಿದೆ.
ತಿವಾರಿಯಿಂದ ವಶಕ್ಕೆ ಪಡಯಲಾದ ಐಫೋನ್ 12 ಪ್ರೋ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ವಿಚಾರಣೆ ವಿವಿಧ ಹಂತಗಳ ಮಹತ್ವದ ಮಾಹಿತಿಗಳನ್ನು ವಕೀಲರೊಂದಿಗೆ ವಾಟ್ಸಾಪ್ ಮೂಲಕ ತಿವಾರಿ ಸಾಕಷ್ಟು ಬಾರಿ ಹಂಚಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.