ಈಶಾನ್ಯ ರಾಜ್ಯ ಮಣಿಪುರದಲ್ಲಿ ನಿನ್ನೆ ಮತ್ತೆ ಹಿಂಸಾಚಾರ ಭುಗಿಲೆದ್ದು ಓರ್ವ ಪೊಲೀಸ್ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ. ಹಿಂಸಾಚಾರ ಪೀಡಿತ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡುವ ಕೆಲವು ಗಂಟೆಗಳ ಮೊದಲು ಈ ಘಟನೆ ನಡೆದಿದೆ.
ಗೃಹ ಸಚಿವ ಅಮಿತ್ ಶಾ ಇಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಶಾಂತಿಯನ್ನು ಕಾಪಾಡಿಕೊಳ್ಳಲು ಮೈತಿ ಮತ್ತು ಕುಕಿ ಸಮುದಾಯಗಳಿಗೆ ಮನವಿ ಮಾಡಲಿದ್ದಾರೆ.
ರಾಜ್ಯದಲ್ಲಿ ಕಳೆದ ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವು ಕನಿಷ್ಠ 80 ಜನರನ್ನು ಬಲಿ ತೆಗೆದುಕೊಂಡಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದ ಭಯೋತ್ಪಾದಕರು ಸೆರೊ ಮತ್ತು ಸುಗುನು ಪ್ರದೇಶದಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ ನಂತರ ರಾಜ್ಯದ ಹಲವು ಭಾಗಗಳಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ಕೆಲ ದಿನಗಳಿಂದ 40 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.
ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ಅಸಾಲ್ಟ್ ರೈಫಲ್‌ಗಳು ಮತ್ತು ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಅವರು ಹಳ್ಳಿಗಳಲ್ಲಿನ ಮನೆಗಳನ್ನು ಸುಟ್ಟು ಹಾಕಿದ್ದಾರೆ. ನಾವು ಸೇನೆ ಮತ್ತು ಇತರ ಭದ್ರತಾ ಪಡೆಗಳ ಸಹಾಯದಿಂದ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ಸುಮಾರು 40 ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿರುವ ವರದಿಗಳು ನಮಗೆ ಸಿಕ್ಕಿವೆ ಎಂದು ಸಿಎಂ ಎನ್. ಬಿರೇನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಮೈತಿ ಸಮುದಾಯವನ್ನ ಎಸ್ ಟಿ ವರ್ಗಕ್ಕೆ ಸೇರಿಸುವುದರ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತು. ಮೈತಿ ಸಮುದಾಯದವರನ್ನ ಎಸ್ ಟಿಗೆ ಸೇರಿಸಲು ಕುಕಿ ಸಮುದಾಯದವರು ಬಲವಾಗಿ ವಿರೋಧಿಸಿದ್ದು ಅಂದಿನಿಂದ ಹಿಂಸಾಚಾರ ರಾಜ್ಯವನ್ನ ಹೊತ್ತಿ ಉರಿಯುವಂತೆ ಮಾಡಿದೆ.