ಮುಂಬೈ : ಮೃತ ತಂದೆಯ ಭವಿಷ್ಯ ನಿಧಿ (ಪಿಎಫ್) ಬಿಡುಗಡೆಗೆ ಪ್ರತಿಯಾಗಿ 23 ವರ್ಷದ ಯುವತಿಯನ್ನು ಹಾಸಿಗೆಗೆ ಕರೆದ ಆರೋಪದ ಮೇಲೆ ಖಾಸಗಿ ಕಂಪನಿಯ ಎಚ್ಆರ್ ಮ್ಯಾನೇಜರ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂಬಂಧ ನ್ಯಾಯಕ್ಕಾಗಿ ಬಾಂದ್ರಾ (ಇ) ನಿವಾಸಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಂತರ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ತನ್ನ ಮತ್ತು ಆರೋಪಿಯ ನಡುವಿನ ಸಂಭಾಷಣೆಗಳನ್ನು ದಾಖಲಿಸಿದ್ದು, ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಆದರೆ, ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ.ವರದಿಯ ಪ್ರಕಾರ, ಮಹಿಳೆ ಮನೆಗೆಲಸ ಮಾಡುತ್ತಿದ್ದು, ತನ್ನ ಕಿರಿಯ ಸಹೋದರ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಾರೆ. ಆಕೆ (ಸಂತ್ರಸ್ತೆ) 15 ವರ್ಷದವಳಿದ್ದಾಗ ಅವಳ ತಂದೆ 2015 ರಲ್ಲಿ ನಿಧನರಾದರು.ಅವರ ಮರಣದ ಮೊದಲು ಭವಿಷ್ಯ ನಿಧಿಯ ಹಣವನ್ನು ಮಗಳ ಹೆಸರಿಗೆ ಮಾಡಿಟ್ಟಿದ್ದರು. ಅದನ್ನು ಅವಳು 18 ವರ್ಷ ತುಂಬಿದ ನಂತರ ಪಡೆಯಬಹುದಾಗಿತ್ತು.
ನಂತರ ಮಹಿಳೆ ಪಿಎಫ್ ಪಡೆಯಲು ಅನೇಕ ಅರ್ಜಿಗಳನ್ನು ಸಲ್ಲಿಸಿದರೂ, ಕಂಪನಿಯು ಅದನ್ನು ಬಿಡುಗಡೆ ಮಾಡಿಲ್ಲ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನಾನು ಎಚ್ಆರ್ ಮ್ಯಾನೇಜರ್ ಅನ್ನು ಸಂಪರ್ಕಿಸಿದಾಗ ಪಿಎಫ್ ಹಣ ಬಿಡುಗಡೆ ಮಾಡಬೇಕಾದರೆ ಲೈಂಗಿಕವಾಗಿ ಸಹಕರಿಸು ಎಂದು ಒತ್ತಾಯಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.