“ವೈದ್ಯೋ ನಾರಾಯಣೋ ಹರಿಃ” ಎಂಬ ಶ್ಲೋಕ ವೈದ್ಯರ ಮಹತ್ವವನ್ನು ತಿಳಿಸುತ್ತದೆ. ಆದರೆ ಇಲ್ಲಿ ರೋಗಿಗಳ ಪ್ರಾಣ ಉಳಿಸುವ ಭವಿಷ್ಯದ ವೈದ್ಯರ ಪ್ರಾಣದ ಜೊತೆ ಚೆಲ್ಲಾಟವಾಡಿದ ಆರೋಪ ಕೇಳಿಬಂದಿದೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಟಾಯ್ಲೆಟ್ ನೀರನ್ನು ಬಳಸಿ ಆಹಾರ ತಯಾರಿಸಲಾಗಿದೆ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ವಿದ್ಯಾರ್ಥಿಗಳು ತುಂಬಾ ಕಷ್ಟಪಡಬೇಕು ಎಂದು ಹೇಳುತ್ತಾರೆ. ಏಕೆಂದರೆ ವೈದ್ಯಕೀಯ ವಿದ್ಯಾರ್ಥಿಯಾಗಲು ಅನೇಕ ಅಡೆತಡೆಗಳನ್ನು ಎದುರಿಸುವುದಲ್ಲದೆ ಲಕ್ಷಾಂತರ ರೂಪಾಯಿ ಶುಲ್ಕವನ್ನೂ ಪಾವತಿಸಬೇಕು. ಕೆಲವು ಕಾಲೇಜುಗಳು ಈ ವಿಷಯದಲ್ಲಿ ಕೋಟ್ಯಂತರ ರೂಪಾಯಿಗಳನ್ನು ವಸೂಲಿ ಮಾಡುತ್ತವೆ. ಇಂತಹ ಹಾಳಾದ ಶಿಕ್ಷಣ ವ್ಯವಸ್ಥೆಯ ನಡುವೆ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿಯೂ ಕಲಬೆರಕೆ ಆರೋಪಗಳು ಕೇಳಿಬರುತ್ತಿವೆ.
ಟಾಯ್ಲೆಟ್ ನೀರಿನಲ್ಲಿ ಅಡುಗೆ
ಮಧ್ಯಪ್ರದೇಶದ ಜಬಲ್‌ಪುರದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದ ಕಾರಣ ಕಾಲೇಜಿನ ಅಧಿಕಾರಿಗಳು ವಿದ್ಯಾರ್ಥಿಗಳಿಗಾಗಿ ವಿಶೇಷ ಆಹಾರವನ್ನು ತಯಾರಿಸಲು ಆದೇಶಿಸಿದ್ದರು. ಆದರೆ ಹೀಗೆ ಆಹಾರ ತಯಾರಿಸುವಾಗ ಟಾಯ್ಲೆಟ್ ಕಮೋಡ್ ಮೂಲಕ ನೀರನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತೆಗೆದ ವಿದ್ಯಾರ್ಥಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಆಕ್ರೋಶ
ಟಾಯ್ಲೆಟ್ ನೀರನ್ನು ಬಳಸಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಆಹಾರ ತಯಾರಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಸಹ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ಸ್ಪಂದಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜಬಲ್‌ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಸಂಜಯ್ ಮಿಶ್ರಾ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಜನರ ಆಗ್ರಹ
ಒಟ್ಟಿನಲ್ಲಿ ತಿನ್ನುವ ಅನ್ನದೊಂದಿಗೆ ಈ ರೀತಿ ಆಟವಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂಬುದು ನೆಟಿಜನ್‌ಗಳ ಆಗ್ರಹ. ವಿಶೇಷವಾಗಿ ಲಕ್ಷಾಂತರ ಶುಲ್ಕ ಕಟ್ಟಿ ಬಂದರೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂತಹ ಕಳಪೆ ಆಹಾರವನ್ನು ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.