ಸಾಮಾನ್ಯವಾಗಿ ಅಡುಗೆ ಮನೆಯ ಕೆಲಸ ತಾಯಂದಿರ ಜವಾಬ್ಧಾರಿ. ಮಗು ಚಿಕ್ಕದಿರುವಾಗ ಅನೇಕರು ಮಗುವನ್ನು ಎತ್ತಿಕೊಂಡೇ ಅಡುಗೆ ಮಾಡುತ್ತಾರೆ. ಮಗು ಕೂಡ ಹಠ ಮಾಡುವುದರಿಂದ ಪಕ್ಕದಲ್ಲೇ ಮಗುವನ್ನು ಕೂರಿಸಿಕೊಂಡು ಅಡುಗೆ ಕೆಲಸಗಳನ್ನು ಪೂರೈಸುತ್ತಾರೆ. ಮಕ್ಕಳು ಕೂಡ ಹೆಚ್ಚಾಗಿ ಅಡುಗೆ ಚಟುವಟಿಕೆಗಳನ್ನು ಆನಂದಿಸುತ್ತಾರೆ. ಮಕ್ಕಳು ಅಡುಗೆ ಕೋಣೆಗೆ ಬರಬಾರದೆಂದೇನೂ ಇಲ್ಲ, ಆದರೆ ಪೋಷಕರು ಸ್ವಲ್ಪ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಮಕ್ಕಳಿಗೆ ಅಪಾಯವಾಗಬಹುದು.
ಅಡುಗೆಮನೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು…
ಒಲೆಯನ್ನು ಎತ್ತರದ ಸ್ಥಳದಲ್ಲಿ ಇರಿಸಿ : ಅಡುಗೆಮನೆಯಲ್ಲಿರುವ ಒಲೆ ಮಕ್ಕಳ ಕೈಗೆ ಸಿಗದಂತೆ ಇರಿಸಿ. ಮಗು ತಿಳಿಯದೇ ಬಿಸಿಯಾದ ಪಾತ್ರೆ, ಅಥವಾ ಬೆಂಕಿಯನ್ನು ಸ್ಪರ್ಷಿಸುವ ಸಾಧ್ಯತೆ ಇರುತ್ತದೆ. ಹತ್ತಿರದಲ್ಲಿ ಯಾವುದೇ ಸ್ಟೂಲ್ ಅಥವಾ ಕುರ್ಚಿಯನ್ನು ಇಡಬೇಡಿ. ಮಗು ಅದರ ಮೇಲೆ ಹತ್ತಿ ಒಲೆಯನ್ನು ಮುಟ್ಟಬಹುದು.
ಕ್ಯಾಬಿನೆಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಇರಿಸಿ: ಮಕ್ಕಳು ಗ್ಯಾಸ್ ಸಿಲಿಂಡರ್ ಮುಟ್ಟದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಅನಿಲ ಸೋರಿಕೆಯ ಅಪಾಯವಿರುತ್ತದೆ. ಆದ್ದರಿಂದ ಸಿಲಿಂಡರ್ ಅನ್ನು ಪ್ರತ್ಯೇಕ ಕ್ಯಾಬಿನೆಟ್‌ನಲ್ಲಿ ಇಟ್ಟುಬಿಡಿ. ಅದನ್ನು ಲಾಕ್ ಮಾಡಿ ಕೀಲಿಯನ್ನು ಎತ್ತರದ ಸ್ಥಳದಲ್ಲಿ ಇಡಿ.
ಸ್ವಚ್ಛತೆ ಬಗ್ಗೆ ಇರಲಿ ಗಮನ: ಅಡುಗೆ ಮನೆಯಲ್ಲಿ ಕೊಳೆ ಅಥವಾ ಎಣ್ಣೆಯ ಜಿಡ್ಡು ಸಹಜ. ಮಕ್ಕಳನ್ನು ಅಂತಹ ಜಾಗದಲ್ಲಿ ಕೂರಿಸಬೇಡಿ. ಕೊಳಕು ವಸ್ತುಗಳನ್ನು ಮುಟ್ಟಿದರೆ ಅವರು ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ನಿಯಮಿತವಾಗಿ ಅಡುಗೆಮನೆಯನ್ನು ಸ್ವಚ್ಛಗೊಳಿಸಿ ಮತ್ತು ಡಸ್ಟ್‌ಬಿನ್ ಬಾಕ್ಸ್ ಅನ್ನು ಮುಚ್ಚಿಡಿ.
ಮಗುವನ್ನು ಒಂಟಿಯಾಗಿ ಬಿಡಬೇಡಿ: ಅಡುಗೆ ಮನೆಯಲ್ಲಿ ಮಗುವನ್ನು ಒಂಟಿಯಾಗಿ ಬಿಡಬೇಡಿ. ಅಡುಗೆ ಮನೆಯಿಂದ ನೀವು ಹೊರಹೋದ ಬಳಿಕ ಲಾಕ್ ಮಾಡಿ. ಏಕಾಂಗಿಯಾಗಿದ್ದಾಗ ಮಗು ಗ್ಯಾಸ್ ಸ್ಟೌವ್ ಮತ್ತು ಚಾಕುವನ್ನು ತಲುಪಲು ಪ್ರಯತ್ನಿಸಬಹುದು.