
ವಿಜಯನಗರ: ಅಡುಗೆ ಎಣ್ಣೆ ತುಂಬಿದ್ದ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಎಣ್ಣೆ ತುಂಬಿಕೊಳ್ಳಲು ಜನರು ಸಾಗರೋಪಾದಿಯಲ್ಲಿ ಹರಿದುಬಂದ ಘಟನೆ ವಿಜಯನಗರ ಜಿಲ್ಲೆಯ ಬಣವಿಕಲ್ಲು ಗ್ರಾಮದಲ್ಲಿ ನಡೆದಿದೆ.
ಕೂಡ್ಲಗಿಯ ಬಣವಿಕಲ್ಲು ಗ್ರಾಮದಲ್ಲಿ ಬೆಂಗಳೂರಿನತ್ತ ಬರುತ್ತಿದ್ದ ಅಡುಗೆ ಎಣ್ಣೆ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಅಡುಗೆ ಎಣ್ಣೆ ಟ್ಯಾಂಕ್ ನಿಂದ ನದಿಯಂತೆ ಎಣ್ಣೆ ಹರಿದು ಹೋಗುತ್ತಿದೆ. ಎಣ್ಣೆ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಕೊಡ, ಕ್ಯಾನ್, ದೊಡ್ಡ ದೊಡ್ಡ ಪಾತ್ರೆಗಳನ್ನು ತಂದು ಸಾವಿರಾರು ಜನರು ಎಣ್ಣೆ ತುಂಬಿಕೊಂಡು ಹೋಗುತ್ತಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.