ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ದೇಶದಾದ್ಯಂತ ಜನತೆಗೆ ಗುಣಮಟ್ಟದ ಆಹಾರವು ದೊರಕಬೇಕೆಂಬ ಉದ್ದೇಶವನ್ನು ಹೊಂದಿದೆ.
ಬೇರೆ ಬೇರೆ ಕಡೆಗಳಲ್ಲಿ ಕಲಬೆರಕೆ ಅಡುಗೆ ಎಣ್ಣೆ ಹಾಗೂ ಅಗ್‍ಮಾರ್ಕ್ ಲೈಸನ್ಸ್ ಪಡೆಯದೇ ಮಿಶ್ರಣ ಎಣ್ಣೆಗಳನ್ನು ಮಾರಾಟ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ರೆಗ್ಯೂಲೇಷನ್ ಕಾಯ್ದೆಯಂತೆ ನಿಯಮ ಉಲ್ಲಂಘಿಸಿದ ಕೆಲವೊಂದು ಪ್ರಕರಣಗಳು ದಾಖಲಾಗಿವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ತ್ರೈಮಾಸಿಕ ಸರ್ವೇಕ್ಷಣಾ ಹಾಗೂ ಜಾರಿ ಆಂದೋಲನ ವರದಿಗಳನ್ನು ಪರಿಶೀಲಿಸಿದಾಗ ಅಡುಗೆ ಎಣ್ಣೆಯು ಅತಿಹೆಚ್ಚು ಕಲಬೆರಕೆ ಮತ್ತು ಪ್ಯಾಕೆಟ್ ಮೇಲೆ ಲೇಬಲ್‍ಗಳನ್ನು ಸರಿಯಾಗಿ ಹಾಕದೇ ಇರುವುದು ಕಂಡುಬಂದಿರುತ್ತದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಆಗಸ್ಟ್ 2 ರಿಂದ 14 ರವರೆಗೆ ಗುಣಮಟ್ಟ ಪ್ರಾಧಿಕಾರವು ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಎಣ್ಣೆಯಲ್ಲಿ ಟ್ರಾನ್ಸ್‍ಫ್ಯಾಟಿ ಆಮ್ಲಗಳ ಅಂಶ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್‍ಮಾರ್ಕ್ ಲೈಸನ್ಸ್ ಇರದೇ ಇರುವ ಮಲ್ಟಿಸೋರ್ಸ್ ಅಡುಗೆ ಎಣ್ಣೆ ಮತ್ತು ಪ್ಯಾಕೆಟ್ ಮಾಡದೇ ಮಾರಾಟ ಮಾಡುವವರನ್ನು ಪತ್ತೆಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಆಗಸ್ಟ್ 2 ರಿಂದ 14 ರವರೆಗೆ ಧಾರವಾಡ ಜಿಲ್ಲೆಯಾದ್ಯಂತ ಬೇರೆ ಬೇರೆ ಅಂಗಡಿಗಳಿಗೆ ಭೇಟಿಕೊಟ್ಟು ಅಡುಗೆ ಎಣ್ಣೆ ಆಹಾರ ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಲಾಗುವುದು ಹಾಗೂ ಈಗಾಗಲೇ ನಿಷೇಧವಾಗಿರುವ ಪ್ಯಾಕೇಟ್ ಇಲ್ಲದ ಮಾರಾಟ ಮಾಡುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಧಿನಿಯಮದಂತೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಧಾರವಾಡ ಜಿಲ್ಲಾ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.