
ಬಾಗಲಕೋಟೆ: ಕುಕ್ಕರ್ ಸ್ಪೋಟಗೊಂಡು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಸಾವಳಗಿಯ ಬ್ಯಾಡಗಿ ವಸ್ತಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದಿದೆ.
4 ವರ್ಷದ ಸಮರ್ಥ ಮತ್ತು 3 ವರ್ಷದ ಅದ್ವಿಕ ಗಾಯಗೊಂಡ ಮಕ್ಕಳು. ಅಂಗನವಾಡಿ ಸಿಬ್ಬಂದಿ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಗಾಯಗೊಂಡ ಮಕ್ಕಳನ್ನು ಸಾವಳಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಒಂದು ಮಗುವಿನ ಕಿವಿಗೆ ಗಾಯವಾಗಿದ್ದು, ಮತ್ತೊಂದು ಮಗುವಿನ ತಲೆಗೆ ಗಂಭೀರ ಗಾಯಗಳಾಗಿವೆ. ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದು ಮಗುವಿನ ತಂದೆ ಹನುಮಂತ ಅಟ್ಯಾಳ ಆರೋಪಿಸಿದ್ದು, ಮಕ್ಕಳ ಚಿಕಿತ್ಸೆಗೆ ಹಣದ ಕೊರತೆ ಹಿನ್ನೆಲೆಯಲ್ಲಿ ಬೇರೆಯವರಿಂದ 25,000 ರೂ. ಸಾಲ ಪಡೆದು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇಷ್ಟೆಲ್ಲ ಘಟನೆ ನಡೆದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.