ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ದಲಿತ ಹುಡುಗಿಯರು ಬಡಿಸುತ್ತಿದ್ದ ಮಧ್ಯಾಹ್ನದ ಊಟ ಎಸೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದಕ್ಕಾಗಿ ಅಡುಗೆಯವನನ್ನು ಬಂಧಿಸಲಾಗಿದೆ
ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರೊಂದಿಗೆ ತಾರತಮ್ಯ ತೋರಿದ ಆರೋಪದ ಮೇಲೆ ಅಡುಗೆ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲಾ ರಾಮ್ ಗುರ್ಜರ್ ಎಂಬಾತ ತಯಾರಿಸಿದ್ದ ಮಧ್ಯಾಹ್ನದ ಊಟವನ್ನು ದಲಿತ ಹುಡುಗಿಯರು ಬಡಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತರು ಬಡಿಸಿದ ಕಾರಣ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಊಟ ಎಸೆಯುವಂತೆ ಹೇಳಿದ್ದಾನೆ. ಆತನ ಸೂಚನೆಯಂತೆ ವಿದ್ಯಾರ್ಥಿಗಳು ಊಟವನ್ನು ಎಸೆದರು.
ಸಂತ್ರಸ್ತ ಬಾಲಕಿಯರು ತಮ್ಮ ಕುಟುಂಬ ಸದಸ್ಯರಿಗೆ ಘಟನೆಯ ಬಗ್ಗೆ ತಿಳಿಸಿದಾಗ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ ಅಡುಗೆಯವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಲಾಲ್ ರಾಮ್ ಶಾಲೆಯಲ್ಲಿ ತಾರತಮ್ಯ ಮಾಡುತ್ತಿದ್ದ. ತಾನು ಆಯ್ಕೆ ಮಾಡಿದ ಮೇಲ್ಜಾತಿ ವಿದ್ಯಾರ್ಥಿಗಳಿಂದ ಊಟ ಬಡಿಸಲು ಹೇಳುತ್ತಿದ್ದ. ಅವರು ಸರಿಯಾಗಿ ಊಟ ಬಡಿಸದ ಕಾರಣ ಶಿಕ್ಷಕರೊಬ್ಬರು ದಲಿತ ಹುಡುಗಿಯರಿಗೆ ಊಟ ಬಡಿಸುವಂತೆ ತಿಳಿಸಿದ್ದರು.
ಅಡುಗೆ ಸಿಬ್ಬಂದಿ ಲಾಲ್ ರಾಮ್ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಗೋಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.