ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಗೆ ಮತಾಂತರಕ್ಕೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದರಿಂದ ಪತ್ನಿಗೆ ಕಿರುಕುಳ ನೀಡಲಾಗಿದೆ. ಗಂಡನ ವಿರುದ್ಧ ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಮೂರು ತಿಂಗಳಿಂದ ಪತಿ ಮತಾಂತರಕ್ಕೆ ಕಿರುಕುಳ ನೀಡುತ್ತಿದ್ದಾನೆ. ಮತಾಂತರವಾಗದಿದ್ದರೆ ತವರಿಗೆ ಹೋಗುವಂತೆ ಬಲವಂತ ಮಾಡುತ್ತಿದ್ದಾನೆ. ಮಕ್ಕಳು ಓದಿಕೊಳ್ಳುವ ಸಮಯದಲ್ಲಿ ಬೈಬಲ್ ಓದುವ ಪತಿ ಪಠ್ಯಪುಸ್ತಕಗಳನ್ನು ಜೋರಾಗಿ ಓದಂತೆ ಮಕ್ಕಳಿಗೆ ತಾಕೀತು ಮಾಡುತ್ತಿದ್ದಾನೆ. ಮನೆಯ ಹಿರಿಯರು ಪಂಚಾಯ್ತಿ ಮಾಡಿದಾಗ ಪತಿ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಮೂವರು ಮಕ್ಕಳನ್ನು ಸಾಕಲಾಗದೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೊಂದ ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡಿಕೊಂಡಿದ್ದ ವ್ಯಕ್ತಿ ಆಮಿಷಕ್ಕೆ ಒಳಗಾಗಿ ಮೂರು ತಿಂಗಳ ಹಿಂದೆ ಮತಾಂತರವಾಗಿದ್ದಾರೆ. ಮತಾಂತರವಾಗುವಂತೆ ಮನೆಯವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.