ಬೆಂಗಳೂರು:
ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿಧಾನ ಪರಿಷತ್ ನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ.
ವಿಧಾನ ಪರಿಷತ್ ನಲ್ಲಿ ಪ್ರತಿಭಟನೆ ಮತ್ತು ಧಿಕ್ಕಾರದ ನಡುವೆ ವಿಧೇಯಕ ಅಂಗೀಕಾರಗೊಂಡಿದೆ. ಬಿಲ್ ಪ್ರತಿಯನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೂದೆ ಪ್ರಕಾರ, ಬಲವಂತ, ಆಮಿಷ, ಮದುವೆಯಾಗುವ ಭರವಸೆ ನೀಡಿ ನಡೆಸುವ ಮತಾಂತರಕ್ಕೆ ನಿಷೇಧವಿದೆ. ಮತಾಂತರಗೊಂಡ ವ್ಯಕ್ತಿಯ ಮನೆಯವರು, ಆಪ್ತರು ದೂರು ನೀಡಿದರೆ ಎಫ್ಐಆರ್ ದಾಖಲಿಸಲಾಗುವುದು. ಬಲವಂತದ ಮತಾಂತರಕ್ಕೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 25,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಮತಾಂತರವಾಗುವ ಮೊದಲು ವ್ಯಕ್ತಿ ಎರಡು ತಿಂಗಳು ಮುಂಚೆ ಜಿಲ್ಲಾಧಿಕಾರಿಗೆ ತಿಳಿಸಬೇಕು. ಈ ಮಾಹಿತಿಯನ್ನು ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. 30 ದಿನಗಳ ಒಳಗೆ ಆಕ್ಷೇಪಣೆ ಬಂದರೆ ಕಂದಾಯ ಇಲಾಖೆ ವಿಚಾರಣೆ ನಡೆಸಬೇಕು. ತಪ್ಪು ಕಂಡು ಬಂದಲ್ಲಿ ಕ್ರಿಮಿನಲ್ ಮುಖದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಲಾಗಿದೆ.
ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ವಿಧಾನಪರಿಷತ್ ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದ್ದು, ಸುಗ್ರೀವಾಜ್ಞೆಗೆ ಕಾಯ್ದೆಯ ಸ್ವರೂಪ ನೀಡಲಾಗಿದೆ.