ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿದೆ. ಮುಂದಿನ ಆರು ತಿಂಗಳಲ್ಲಿ ಕಾಯ್ದೆಯನ್ನು ಸದನಗಳಲ್ಲಿ ಅಂಗೀಕರಿಸಬೇಕಿದೆ. ಎರಡೂ ಸದನಗಳಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಬೇಕಿದೆ.
ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಬಲವಂತ, ವಂಚನೆ, ಒತ್ತಾಯ ಮತ್ತು ಆಮಿಷದ ಮೂಲಕ ನಡೆಸುವ ಮತಾಂತರ ನಿಷೇಧಿಸಲಾಗಿದೆ. ಮತಾಂತರಗೊಂಡವರ ಪೋಷಕರು, ಸಹೋದರರು, ಸಹೋದರಿಯರು, ಸಹವರ್ತಿ ಅಥವಾ ಸಹೋದ್ಯೋಗಿಗಳು ಮತಾಂತರದ ಬಗ್ಗೆ ದೂರು ನೀಡಿದರೆ ಎಫ್ಐಆರ್ ದಾಖಲಿಸಲಾಗುತ್ತದೆ. ಬಲವಂತದ ಮತಾಂತರಕ್ಕೆ ಮೂರರಿಂದ ಐದು ವರ್ಷ ಜೈಲು 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ಮತಾಂತರ ಬಯಸುವ ವ್ಯಕ್ತಿ ಕನಿಷ್ಠ ಎರಡು ತಿಂಗಳ ಮೊದಲು ಜಿಲ್ಲಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು. ಅಪ್ರಾಪ್ತ ವ್ಯಕ್ತಿ, ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರರಿಂದ ಹತ್ತು ವರ್ಷಗಳು ಜೈಲು ಶಿಕ್ಷೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ತೀರ್ಮಾನ ಕೈಗೊಂಡಿದ್ದು, ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು. ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯ್ದೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ವಿಧಾನಪರಿಷತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯುವ ಸಾಧ್ಯತೆ ಇದೆ.