ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿವಾಹಕ್ಕೆ ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ ರವೀಂದ್ರ ಗಡಾದಿ ಅವರೇ ಕಾರಣವೆಂದು ಸಂತ್ರಸ್ತೆ ಮತ್ತು ಆಕೆಯ ತಾಯಿ ನೇರವಾಗಿ ಆರೋಪಿಸಿದ್ದಾರೆ.
2008ರ ಜೂನ್ 1ರಂದು ಜನಿಸಿದ ಬಾಲಕಿಗೆ 2023ರ ಅಕ್ಟೋಬರ್ 23ರಂದು ವಿವಾಹ ಮಾಡಲಾಗಿದೆ. ಈ ವೇಳೆ ಬಾಲಕಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಐಗಳಿಯ ಹರಿಜನ ಕೇರಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಈ ವಿವಾಹ ನಡೆದಿದೆ. ಸದ್ಯ ಬಾಲಕಿಗೆ ಮೂರೂವರೆ ತಿಂಗಳ ಗಂಡು ಮಗುವಿದೆ.
“ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರೇ ನನ್ನ ಆಧಾರ್ ಕಾರ್ಡ್‌ನಲ್ಲಿ ಜನ್ಮದಿನಾಂಕ ತಿದ್ದಿದ್ದಾರೆ. ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಆದರೆ, ಪೊಲೀಸ್ ಠಾಣೆಗೆ ದೂರು ನೀಡಿದಾಗ ಕೇವಲ ನನ್ನ ಕುಟುಂಬದವರ ಹೆಸರು ಮಾತ್ರ ಬರೆಯುತ್ತಿದ್ದಾರೆ. ಪೊಲೀಸರು ನನ್ನನ್ನು ಹೆದರಿಸುತ್ತಿದ್ದಾರೆ. ರವೀಂದ್ರ ಗಡಾದಿ ಹಾಗೂ ವರ್ಷಾ ಗಡಾದಿ ಎಂಬ ಆರೋಪಿಗಳ ಹೆಸರು ಎಫ್‌ಐಆರ್‌ನಲ್ಲಿ ಬರೆಯುತ್ತಿಲ್ಲ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
“ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಹಾಗೂ ವರ್ಷಾ ಗಡಾದಿ ಅವರೇ ನನ್ನ ಮಗಳ ಜನ್ಮ ದಿನಾಂಕ ತಿದ್ದಿಸಿ ಮದುವೆ ಮಾಡಿಸಿದರು. ನಾವು ಹೆಣ್ಣು ಕೊಡುವುದಿಲ್ಲ ಎಂದು ಹೇಳಿದ್ದೆವು. ಆದರೆ, ಅವರು ‘ನಾನು ಪೊಲೀಸ್ ಅಧಿಕಾರಿಯಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿ ಮದುವೆ ಮಾಡಿಸಿದರು’ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.
ಈ ಬಾಲ್ಯ ವಿವಾಹದ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರವೀಂದ್ರ ಗಡಾದಿ ಕೂಡ ಅದರಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.