ಹಾಲಿವುಡ್ ಚಲನಚಿತ್ರಗಳು ಅಥವಾ ವೆಬ್ ಸರಣಿಗಳಲ್ಲಿ ಝೊಂಬಿಗಳನ್ನು ಆಧರಿಸಿದ ಹಲವಾರು ಕಥೆಗಳು ಬಂದಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನೈಜ ವಿಡಿಯೋವೊಂದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಕೆಲವು ಶಾಲಾ ವಿದ್ಯಾರ್ಥಿಗಳು ಝೊಂಬಿಗಳಂತೆ ಬೀದಿಗಳಲ್ಲಿ ತೆವಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇಂಡೋನೇಷ್ಯಾದಲ್ಲಿ ಪ್ರಾರಂಭವಾಗಿರೋ ಅಭಿಯಾನದ ವಿಡಿಯೋ ಇದು.
ಮುಂಜಾನೆ ಬೇಗ ಏಳುವುದು ಸುಲಭವಲ್ಲ. ಆದರೆ ಬೇಗ ಏಳುವುದರಿಂದ ಅನೇಕ ಪ್ರಯೋಜನಗಳಿವೆ. ಬೆಳಗಿನ ವಾಕಿಂಗ್, ವ್ಯಾಯಾಮ, ಇತರ ಕೆಲಸಗಳನ್ನು ಮುಗಿಸಿ ಶಾಲೆ – ಕಾಲೇಜಿಗೆ ಅಥವಾ ಕಚೇರಿಗೆ ಆರಾಮಾಗಿ ಹೋಗಬಹುದು. ಆದರೆ ಇಂಡೋನೇಷ್ಯಾದ ಶಾಲಾ ವಿದ್ಯಾರ್ಥಿಗಳು ದೊಡ್ಡ ಸಮಸ್ಯೆಯನ್ನೇ ಎದುರಿಸುತ್ತಿದ್ದಾರೆ. ಮಕ್ಕಳಿಗೆ ಬೆಳಿಗ್ಗೆ 5.30ಕ್ಕೆಲ್ಲಾ ತರಗತಿ ಪ್ರಾರಂಭವಾದ್ರೆ ಅವರ ಸ್ಥಿತಿ ಹೇಗಿರಬೇಡ ಹೇಳಿ?
ಇಂಡೋನೇಷ್ಯಾದ ನಗರವೊಂದರಲ್ಲಿ ಮಕ್ಕಳು ಮುಂಜಾನೆ ಮನಸ್ಸಿಲ್ಲದ ಮನಸ್ಸಿನಿಂದ ತೆವಳುತ್ತಲೇ ಬೆಳಗ್ಗೆ 5.30ಕ್ಕೆ ಶಾಲೆಗೆ ಹಾಜರಾಗುತ್ತಿದ್ದಾರೆ. ಈ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಂಜಾನೆ ನಿದ್ದೆಯಲ್ಲೇ ಶಾಲೆಗೆ ಹೋಗುವ ಮಕ್ಕಳು ಪಾಲಕರಿಗೂ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ವಾಸ್ತವವಾಗಿ ಇದು ವಿವಾದಾತ್ಮಕ ಪೈಲಟ್ ಯೋಜನೆಯ ಭಾಗವಾಗಿದೆ, ಇದರ ಅಡಿಯಲ್ಲಿ ಮಕ್ಕಳನ್ನು ಬೆಳಿಗ್ಗೆ 5.30ಕ್ಕೆ ಶಾಲೆಗೆ ಕರೆಸಲಾಗುತ್ತಿದೆ.
ಇಂಡೋನೇಷ್ಯಾದ ನಗರದಲ್ಲಿ ಡಾನ್ ಸ್ಕೂಲ್ ಈ ಪ್ರಯೋಗ ನಡೆಯುತ್ತಿದೆ. ಈ ಕಾರಣಕ್ಕೆ ಶಾಲಾ ಮಕ್ಕಳು ರಸ್ತೆಯಲ್ಲಿ ಸೋಮಾರಿಗಳಂತೆ ಓಡಾಡುತ್ತಿರುವುದು ಕಂಡುಬರುತ್ತಿದೆ. ಈ ಪ್ರಾಯೋಗಿಕ ಯೋಜನೆಯು ನುಸಾ ತೆಂಗರಾ ಪ್ರಾಂತ್ಯದ ರಾಜಧಾನಿ ಕುಪಾಂಗ್‌ನಲ್ಲಿ ನಡೆಯುತ್ತಿದೆ. ಇಲ್ಲಿನ 10 ಪ್ರೌಢಶಾಲೆಗಳಲ್ಲಿ 12ನೇ ತರಗತಿಯ ವಿದ್ಯಾರ್ಥಿಗಳಿಗೆಲ್ಲ ಬೆಳಗ್ಗೆ 5.30ಕ್ಕೆ ಶಾಲೆಗೆ ಬರುವಂತೆ ತಿಳಿಸಲಾಗಿದೆ.
ಇಷ್ಟು ಮುಂಜಾನೆ ಮಕ್ಕಳನ್ನು ಶಾಲೆಗೆ ಕರೆಸುತ್ತಿರುವುದಕ್ಕೆ ಪಾಲಕರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳು ಶಾಲೆಯಿಂದ ಹಿಂತಿರುಗುವಷ್ಟರಲ್ಲಿ ತುಂಬಾ ಸುಸ್ತಾಗಿರುತ್ತಾರೆ ಅನ್ನೋದು ಪೋಷಕರ ಕಳಕಳಿ.