ಕೊಪ್ಪಳ: ನಾಲ್ಕು ದಿನಗಳ ಹಿಂದೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದ ಉಪಗುತ್ತಿಗೆದಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಕೊಪ್ಪಳದ ಬಿ.ಟಿ.ಪಾಟೀಲ್ ನಗರದ ರಾಜೀವ್ ಬಗಾಡೆ ಮೃತ ಉಪಗುತ್ತಿಗೆದಾರ. ಕೆಲಸ ಮಾಡಿದ್ದಕ್ಕೆ ಕೆಲ ಗುತ್ತಿಗೆದಾರರು ಹಣ ನೀಡಿರಲಿಲ್ಲ. ಇನ್ನೂ ಕೆಲ ಸ್ನೇಹಿತರು ತನ್ನ ಬಳಿಯಿಂದ ಪಡೆದುಕೊಂಡಿದ್ದ ಹಣವನ್ನೂ ವಾಪಾಸ್ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದರು ಎಂದು ರಾಜೀವ್ ಬಗಾಡೆ ಪೊಲೀಸರ ಬಳಿ ಹೇಳಿಕೆ ನೀಡಿದ್ದ.
ರಾಜೀವ್ ಬಗಾಡೆ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಗಾದೇ ಇಂದು ಕೊನೆಯುಸಿರೆಳೆದಿದ್ದಾರೆ.
ಇನ್ನು ರಾಜೀವ್ ಬಗಾಡೆ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, 7 ಜನ ಪ್ರಭಾವಿಗಳ ಹೆಸರನ್ನು ಬರೆದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯ ಚನ್ನಪ್ಪ ಕೋಟ್ಯಾಳ, ದೊಡ್ಡಪ್ಪ ಹರಗುರಿ, ನಗರಸಭೆ ಮಾಜಿ ಸದಸ್ಯ ಡಾ.ಉಪೇಂದ್ರ ರಾಜು, ಮುನಿ ವಿಜಯಕುಮಾರ್, ರಫಿ, ಮಲ್ಲಿಕಾರ್ಜುನ್ ಸೇರಿದಂತೆ 7 ಜನರ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತರು ಎಂದು ಹೇಳಲಾಗುತ್ತಿದೆ.