ಬೆಂಗಳೂರು: ಕಾಮಗಾರಿಗಳಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಸಂಬಂಧಿಸಿದ ಸಚಿವರಿಗೆ ದೂರು ನೀಡಿದ ಪ್ರಥಮ ದರ್ಜೆ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್‌ಐಡಿಎಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 7 ಅಧಿಕಾರಿಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯಿಂದ ಸರ್ಕಾರಿ ಅಧಿಕಾರಿಗಳು ಬೆದರಿಕೆ ಹಾಕಿಸಿದ್ದಾರೆ ಎಂದು 5ನೇ ಎಸಿಎಂಎಂ ಕೋರ್ಟ್ ಗೆ ಗುತ್ತಿಗೆದಾರ ಬಿ.ಕೆ. ಮೋಹನ್ ಕುಮಾರ್ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು.
ಈ ಸಂಬಂಧ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ(ಕೆಆರ್‌ಐಡಿಎಲ್) ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್ ಶ್ರೀಹರಿ, ಸಹಾಯಕ ನಿರ್ವಾಹಕ ಇಂಜಿನಿಯರ್ ಗಳಾದ ವಿ. ಶ್ರೀಧರ್, ಲಕ್ಷ್ಮಿ ಪಾಟೀಲ್, ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಹೆಚ್., ಮಾರಂಗಪ್ಪ, ಲೆಕ್ಕ ಪರಿಶೋಧನೆ ವಿಭಾಗದ ನಿವೃತ್ತ ನಿರ್ದೇಶಕ ಕೆ.ಹೆಚ್. ನಾಗರಾಜ್, ಜಂಟಿ ಕಾರ್ಯದರ್ಶಿ ಸಿದ್ದೇಶ್ ಪೋತಲಕಟ್ಟೆ, ಸೂಪರಿಂಟೆಂಡಿಂಗ್ ಇಂಜಿನಿಯರ್ ಮುಕ್ಕಣ್ಣ ನಾಯಕ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.