ಸಿನಿಮೀಯ ರೀತಿಯಲ್ಲಿ ಸುಪಾರಿ ಕಿಲ್ಲರ್, ವೈದ್ಯರೊಬ್ಬರನ್ನು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಆದರೆ ಆತನ ಜೀವವನ್ನ ಒಮ್ಮೆ ವೈದ್ಯರು ಉಳಿಸಿದ್ದರಿಂದ ಕೊಲೆಗೂ ಮುನ್ನ ಎಚ್ಚರಿಕೆ ನೀಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಕೊಲೆ ಬೆದರಿಕೆ ಕರೆ ಸ್ವೀಕರಿಸಿದ ವೈದ್ಯರು ಪೊಲೀಸರನ್ನ ಸಂಪರ್ಕಿಸಿದ್ದು ರಕ್ಷಣೆ ಕೋರಿದ್ದಾರೆ.
ಬ್ರಿಜ್ ವಿಹಾರ್ ಕಾಲೋನಿಯಲ್ಲಿ ಶೇಖರ್ ಆಸ್ಪತ್ರೆಯನ್ನು ನಡೆಸುತ್ತಿರುವ ಸೋಮ್ ಶೇಖರ್ ದೀಕ್ಷಿತ್ ಅವರು ಎಫ್ಐಆರ್ ದಾಖಲಿಸಿದ್ದಾರೆ. ಕೊಲೆಗಾರನ ಜೀವವನ್ನು ಒಮ್ಮೆ ಉಳಿಸಿದ್ದರಿಂದ ನನ್ನನ್ನು ಕೊಲೆ ಮಾಡುವ ಪಿತೂರಿಯ ಬಗ್ಗೆ ಎಚ್ಚರಿಸಿರುವುದಾಗಿ ತಿಳಿಸಿದ್ದಾನೆಂದು ವೈದ್ಯರು ಪೊಲೀಸರ ಬಳಿ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 507 (ಅಪರಾಧ ಬೆದರಿಕೆ) ಅಡಿಯಲ್ಲಿ ಶಹಜಹಾನ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸುಪಾರಿ ಕಿಲ್ಲರ್ ರಾಜನ್ ಶರ್ಮಾ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಷಹಜಹಾನ್ಪುರ ಎಎಸ್ಪಿ (ನಗರ) ಸುಧೀರ್ ಜೈಸ್ವಾಲ್ ಬೆದರಿಕೆಯ ಹಿನ್ನೆಲೆಯಲ್ಲಿ ವೈದ್ಯರಿಗೆ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಎಫ್ಐಆರ್ನ ಪ್ರಕಾರ ಈ ವಾರದ ಆರಂಭದಲ್ಲಿ 18 ವರ್ಷದ ಯುವಕ ವೈದ್ಯರ ಬಳಿಗೆ ಬಂದು ಓರ್ವ ವ್ಯಕ್ತಿಯೊಂದಿಗೆ ಫೋನ್ನಲ್ಲಿ ಮಾತನಾಡಲು ಕೇಳಿಕೊಂಡಿದ್ದ. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು ರಾಜನ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ. ನನ್ನನ್ನು ಕೊಲೆ ಮಾಡಲು ಆತ 80 ಲಕ್ಷ ರೂಪಾಯಿಗೆ ಸುಪಾರಿ ಒಪ್ಪಿಕೊಂಡಿದ್ದು, ಅದಕ್ಕಾಗಿ ಮುಂಗಡ ಮೊತ್ತವನ್ನೂ ತೆಗೆದುಕೊಂಡಿರುವುದಾಗಿ ಹೇಳಿದ್ದ ಎಂದು ವೈದ್ಯರು ಹೇಳಿದ್ದಾರೆ.
ಒಮ್ಮೆ ತನ್ನ ಜೀವ ಉಳಿಸಿದ್ದಕ್ಕಾಗಿ ರಾಜನ್ ಶರ್ಮಾ ಪಿತೂರಿಯ ಬಗ್ಗೆ ವೈದ್ಯರಿಗೆ ಎಚ್ಚರಿಕೆ ನೀಡಲು ನಿರ್ಧರಿಸಿದ್ದನಂತೆ. ಹಾಗು ಪೊಲೀಸರಿಗೆ ಮಾಹಿತಿ ನೀಡದೆ ಲಕ್ನೋ ಅಥವಾ ದೆಹಲಿಯಲ್ಲಿ ಭೇಟಿಯಾಗುವಂತೆ ಸುಪಾರಿ ಕಿಲ್ಲರ್ ರಾಜನ್ ಶರ್ಮಾ, ವೈದ್ಯರನ್ನು ಕೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆತನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರದಲ್ಲಿ ತಮಗೆ ಸಹಾಯ ಮಾಡುವಂತೆಯೂ ವೈದ್ಯರಿಗೆ ಆತ ಕೇಳಿಕೊಂಡಿದ್ದಾನೆ ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.