alex Certify ಮಹಿಳೆಯರಿಗೆ ಮಾರಕವಾಗಬಹುದು ಗರ್ಭನಿರೋಧಕ ಮಾತ್ರೆಗಳು; ತಜ್ಞರೇ ಬಹಿರಂಗಪಡಿಸಿದ್ದಾರೆ ಅಪಾಯಕಾರಿ ಅಡ್ಡಪರಿಣಾಮ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಮಾರಕವಾಗಬಹುದು ಗರ್ಭನಿರೋಧಕ ಮಾತ್ರೆಗಳು; ತಜ್ಞರೇ ಬಹಿರಂಗಪಡಿಸಿದ್ದಾರೆ ಅಪಾಯಕಾರಿ ಅಡ್ಡಪರಿಣಾಮ…..!

ಬೇಡದ ಗರ್ಭಧಾರಣೆ ಅಥವಾ ಜನನ ನಿಯಂತ್ರಣಕ್ಕಾಗಿ ಗರ್ಭನಿರೋಧಕ ಮಾತ್ರೆಗಳು ಬಳಕೆಯಲ್ಲಿವೆ. ಗರ್ಭಧಾರಣೆಯನ್ನು ತಡೆಗಟ್ಟಲು ಇದು ಮಹಿಳೆಯರಿಗೆ ಪರಿಣಾಮಕಾರಿ ಮತ್ತು ಪ್ರಾಯೋಗಿಕ ಮಾರ್ಗವಾಗಿದೆ. ಆದರೆ ಪ್ರತಿಯೊಂದು ಔಷಧಿಗಳಂತೆ ಈ ಮಾತ್ರೆಗಳಲ್ಲೂ ಕೆಲವು ಸಂಭಾವ್ಯ ಅನಾನುಕೂಲಗಳು ಮತ್ತು ಅಡ್ಡಪರಿಣಾಮಗಳಿವೆ. ಇದನ್ನು ಪ್ರತಿ ಮಹಿಳೆಯೂ ತಿಳಿದಿರಬೇಕು.

ಗರ್ಭನಿರೋಧಕ ಮಾತ್ರೆಗಳು ಹಾರ್ಮೋನ್ ಆಧಾರಿತವಾಗಿದ್ದು, ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿನ್ ಅಥವಾ ಪ್ರೊಜೆಸ್ಟ್ರಾನ್‌ ಸಂಯೋಜನೆಯನ್ನು ಹೊಂದಿರುತ್ತವೆ. ಇವು ಅಂಡಾಶಯದಿಂದ (ಅಂಡೋತ್ಪತ್ತಿ) ಅಂಡಾಣುಗಳ ಬಿಡುಗಡೆಯನ್ನು ತಡೆಯುತ್ತವೆ ಮತ್ತು ಗರ್ಭಕಂಠದ ಸುತ್ತಲಿನ ಲೋಳೆಯನ್ನು ದಪ್ಪವಾಗಿಸುತ್ತದೆ, ಇದರಿಂದ ವೀರ್ಯವು ಗರ್ಭಾಶಯವನ್ನು ತಲುಪಲು ಕಷ್ಟವಾಗುತ್ತದೆ. ಈ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡರೆ ಅವು 99 ಪ್ರತಿಶತಕ್ಕಿಂತ ಹೆಚ್ಚು ಪರಿಣಾಮಕಾರಿ.

ಗರ್ಭನಿರೋಧಕ ಮಾತ್ರೆಗಳ ಗಂಭೀರ ಅಡ್ಡಪರಿಣಾಮಗಳು

ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮಹಿಳೆಯರಿಗೆ ಸಾಕಷ್ಟು ತೊಂದರೆಗಳಾಗಬಹುದು.

* ರಕ್ತ ಹೆಪ್ಪುಗಟ್ಟುವಿಕೆ: ಜನನ ನಿಯಂತ್ರಣ ಮಾತ್ರೆಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ವಿಶೇಷವಾಗಿ ಧೂಮಪಾನ ಮಾಡುವ ಅಥವಾ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

* ಹೃದ್ರೋಗ: ಈ ಮಾತ್ರೆಗಳ ದೀರ್ಘಾವಧಿಯ ಬಳಕೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು, ಇದು ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ.

* ಯಕೃತ್ತಿನ ಸಮಸ್ಯೆಗಳು: ಜನನ ನಿಯಂತ್ರಣ ಮಾತ್ರೆಗಳು ಕೆಲವು ಮಹಿಳೆಯರಲ್ಲಿ ಯಕೃತ್ತಿನ ಗಡ್ಡೆಗಳನ್ನು ಉಂಟುಮಾಡಬಹುದು.

* ಸ್ತನ ಕ್ಯಾನ್ಸರ್ ಅಪಾಯ: ಜನನ ನಿಯಂತ್ರಣ ಮಾತ್ರೆಗಳ ಬಳಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂಬುದು ಕೆಲವು ಸಂಶೋಧನೆಗಳಲ್ಲಿ ದೃಢಪಟ್ಟಿದೆ.

* ಮೂಡ್ ಸ್ವಿಂಗ್ ಮತ್ತು ಖಿನ್ನತೆ: ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಇದರಿಂದಾಗಿ ಮಹಿಳೆಯರು ಮೂಡ್ ಸ್ವಿಂಗ್‌, ಆತಂಕ ಅಥವಾ ಖಿನ್ನತೆಯನ್ನು ಎದುರಿಸಬಹುದು.

35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು, ಧೂಮಪಾನಿಗಳು, ಅಧಿಕ ರಕ್ತದೊತ್ತಡ, ಥ್ರಂಬೋಸಿಸ್ ಅಥವಾ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. ಜನನ ನಿಯಂತ್ರಣ ಮಾತ್ರೆಗಳು ಸೂಕ್ತವಲ್ಲ ಎನಿಸಿದರೆ ಗರ್ಭಧಾರಣೆಯನ್ನು ತಡೆಯಲು ಇನ್ನೂ ಅನೇಕ ವಿಧಾನಗಳಿವೆ. ಗರ್ಭಾಶಯದ ಸಾಧನಗಳು (IUD ), ಕಾಂಡೋಮ್‌, ಜನನ ನಿಯಂತ್ರಣ ಪ್ಯಾಚ್‌  ಮತ್ತು ಇಂಪ್ಲಾಂಟ್ಸ್‌ನ ನೆರವು ಪಡೆದುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...