ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಲಚ್ಯಾಣ ಗ್ರಾಮದ ಸತೀಶ ಮುಜಗೊಂಡ ಅವರ ಪುತ್ರ ಸಾತ್ವಿಕ್ ಕೊಳವೆ ಬಾವಿಯಲ್ಲಿ ಬಿದ್ದ ಮಗು. ಮನೆಯ ಸಮೀಪದ ಜಮೀನಿನಲ್ಲಿ ಬೋರ್ವೆಲ್ ಕೊರೆಸಲಾಗಿತ್ತು. ಮೋಟರ್ ಕೆಳಗಿಳಿಸಲು ಕೊಳವೆಬಾವಿಗೆ ಮುಚ್ಚಿದ್ದ ಕಲ್ಲು ತೆಗೆಯಲಾಗಿದ್ದು, ಆಟವಾಡುತ್ತಾ ಅಲ್ಲಿಗೆ ತೆರಳಿದ ಮಗು ತಲೆ ಕೆಳಗಾಗಿ ಬಿದ್ದಿದೆ.
ಬೋರ್ವೆಲ್ ನಲ್ಲಿ ಬಿದ್ದ ಮಗುವಿನ ರಕ್ಷಣೆಗಾಗಿ ಬಿರುಸಿನ ಕಾರ್ಯಾಚರಣೆ ನಡೆಸಲಾಗಿದೆ. ಆಕ್ಸಿಜನ್ ಪೂರೈಕೆ ಮಾಡಲಾಗಿದ್ದು, ಸಮಾನಾಂತರವಾಗಿ ಬಾವಿ ತೋಡಲಾಗುತ್ತಿದೆ. ಬಂಡೆ ಅಡ್ಡ ಬಂದಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ ಕಾರ್ಯಾಚರಣೆ ನಿಧಾನವಾಗಿ ಸಾಗಿದೆ. ಬಾಲಕ ಸುಮಾರು 15 ರಿಂದ 20 ಅಡಿ ಆಳದಲ್ಲಿ ಬಿದ್ದಿರಬಹುದು ಎಂದು ಹೇಳಲಾಗಿದೆ.
ಕ್ಯಾಮರಾ ಇಳಿಬಿಟ್ಟು ಮಗುವಿನ ಚಲನವಲನ ಗಮನಿಸಲಾಗುತ್ತಿದೆ. ಮಗುವನ್ನು ತಲುಪಲು ಮೂರ್ನಾಲ್ಕು ಅಡಿ ಬಾಕಿ ಇದೆ. ಕುಟುಂಬದವರು ಮಗುವನ್ನು ಉಳಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಗ್ರಾಮಸ್ಥರು ಮಗುವಿನ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.