ಜಸ್ಟೀಸ್ ಎಸ್ ಮುರಳೀಧರ್ ಅವರ ಕುರಿತಂತೆ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇಂದು ಕ್ಷಮೆಯಾಚಿಸಿದ್ದಾರೆ.
ಬೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೮ ರಲ್ಲಿ ಜಸ್ಟಿಸ್ ಎಸ್. ಮುರಳೀಧರ್ ಕುರಿತಂತೆ ಮಾಡಿದ್ದ ನಿಂದನೆ ಪ್ರಕರಣಕ್ಕೆ ಈಗ ತೆರೆಬಿದ್ದಿದೆ. ಈ ಪ್ರಕರಣ ಸಂಬಂಧ ವಿವೇಕ್ ಅಗ್ನಿಹೋತ್ರಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧ ಪಟ್ಟ ಆರೋಪಿಯಾಗಿದ್ದ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಖ ಅವರ ಗೃಹಬಂಧನ ಮತ್ತು ಟ್ರಾನ್ಸಿಟ್ ರಿಮಾಂಡ್ ಆದೇಶವನ್ನು ರದ್ದುಪಡಿಸಿ ಜಸ್ಟಿಸ್ ಮುರಳೀಧರ್ ಆದೇಶ ಹೊರಡಿಸಿದ್ದರು.
ಈ ಸಂಬಂಧ ವಿವೇಕ್ ಅಗ್ನಿಹೋತ್ರಿ ೨೦೧೮ ರಲ್ಲಿ ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದ ಹಾಗೂ ಪ್ರಸಕ್ತ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಮುರಳೀಧರ್ ಅವರ ವಿರುದ್ಧ ಟ್ವೀಟ್ ಪೋಸ್ಟ್ ಮಾಡಿದ್ದರು. ಹೀಗಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಡಿಸೆಂಬರ್ (೨೦೨೨) ನಲ್ಲಿ ಅಗ್ನಿಹೋತ್ರಿ ಬೇಷರತ್ ಕ್ಷಮೆಯಾಚಿಸಿದ್ದರು, ಆದರೆ ನ್ಯಾಯಾಲಯದ ಮುಂದೆ ಹಾಜರಾಗಿ ಖುದ್ದಾಗಿ ವಿಷಾದ ವ್ಯಕ್ತಪಡಿಸಬೇಕೆಂದು ನ್ಯಾಯಾಲಯ ಸೂಚಿಸಿತ್ತು.
ಆದ್ದರಿಂದ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಅಗ್ನಿಹೋತ್ರಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ನನಗೆ ನ್ಯಾಯಾಂಗದ ಮೇಲೆ ಬಹಳಷ್ಟು ಗೌರವವಿದೆ ಎಂದು ಈ ಸಮಯದಲ್ಲಿ ಹೇಳಿದ್ದಾರೆ .
ಸದ್ಯ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬೇಷರತ್ ಕ್ಷಮೆಯಾಚಿಸಿರುವುದರಿಂದ ಪ್ರಕರಣವನ್ನು ಕೈಬಿಡಲಾಗಿದೆ.
ಈ ಬೆನ್ನಲ್ಲೇ ಜಸ್ಟಿಸ್ ಸಿದ್ಧಾರ್ಥ್ ಮೃದುಲ್ ಮತ್ತು ಜಸ್ಟಿಸ್ ಮಹಾಜನ್ ಅವರ ವಿಭಾಗೀಯ ಪೀಠ, ನ್ಯಾಯಾಂಗ ನಿಂದನೆ ಪ್ರಕರಣ ವಾಪಸ್ ಪಡೆದಿದ್ದು , ಇನ್ನು ಮುಂದೆ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ.