ಬೆಂಗಳೂರು: ಕಲುಷಿತ ನೀರು ಸೇವಿಸಿ ತುಮಕೂರಿನಲ್ಲಿ 6 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ, ಗ್ಯಾರಂಟಿ ಎಂದು ಹೇಲುತ್ತಾ ಕುಡಿಯಲೂ ನೀರು ಕೊಟ್ಟಿಲ್ಲ. ಹಾಗಾಗಿ ಕಲುಷಿತ ನೀರು ಕುಡಿಯುವ ಸ್ಥಿತಿ ಬಂದಿದೆ. ಸಿಎಂ ತವರು ಕ್ಷೇತ್ರದಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕುಡಿಯುವ ನೀರು ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿದೆ. ಜಿಲ್ಲಾಧಿಕಾರಿ ಕೇಳಿದರೆ ನೀರಿನ ಸಮಸ್ಯೆಯಲ್ಲ. ಅವರು ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಕೊಪ್ಪಳದಲ್ಲಿಯೂ ಹೀಗೆ ಆಗಿದೆ. ಇಡೀ ರಾಜ್ಯದಲ್ಲಿ ಕಲುಷಿತ ನೀರು ಸೇವಿಸಿ ಜನ ಸಾಯುತ್ತಿದ್ದಾರೆ. ಟ್ಯಾಂಕರ್ ಶುದ್ಧ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರ ಪಾಪರ್ ಆಗಿದೆ ಎಂಬುದಕ್ಕೆ ಇದು ಉದಾಹರಣೆ. ಸರ್ಕಾರದ ನಿರ್ಲಕ್ಷ್ಯವೇ ದುರಂತಗಳಿಗೆ ಕಾರನ ಎಂದು ಕಿಡಿಕಾರಿದ್ದಾರೆ.