ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವಿಶೇಷ ಕಾರ್ಯಾಚರಣೆ ನಡೆಸಿ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ 2.48 ಲಕ್ಷ ಕಾರ್ಮಿಕರ ಕಾರ್ಡುಗಳನ್ನು ರದ್ದು ಮಾಡಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 18.49 ಲಕ್ಷ ಮಹಿಳೆಯರು, 27.83 ಲಕ್ಷ ಪುರುಷರು ಸೇರಿ 46.42 ಲಕ್ಷ ಕಾರ್ಮಿಕರು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡಿದ್ದಾರೆ. ಇವರಲ್ಲಿ 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡುಗಳನ್ನು ರದ್ದು ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 1,69,180 ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಬೀದರ್ ಜಿಲ್ಲೆಯಲ್ಲಿ 25,000, ಶಿವಮೊಗ್ಗದಲ್ಲಿ 6,900, ಉತ್ತರ ಕನ್ನಡ 4155 ಸೇರಿದಂತೆ 2,48,987 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಕಲಿ ಕಾರ್ಡ್ ಗಳು ಪತ್ತೆಯಾಗಿವೆ. ದಾಖಲಾತಿಗಳ ಪರಿಶೀಲನೆ ನಡೆಸಿ ನಕಲಿ ಕಾರ್ಮಿಕರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.
ಸಾವಿರಾರು ಮಂದಿ ಸುಳ್ಳು ದಾಖಲೆ ಸೃಷ್ಟಿಸಿ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡಿರುವುದು ಬಹಿರಂಗವಾಗಿದೆ. ಸೌಲಭ್ಯ ಪಡೆದುಕೊಳ್ಳಲು ಈ ರೀತಿ ಮಾಡಲಾಗಿದ್ದು, ಪತ್ತೆ ಹಚ್ಚಿದ ಕಾರ್ಮಿಕ ಮಂಡಳಿ ಕಾರ್ಡ್ ಗಳನ್ನು ರದ್ದು ಮಾಡಿದೆ.