ಚಿಕ್ಕಮಗಳೂರು: ಹುಲಿ ಸಂರಕ್ಷಿತ ಪ್ರದೇಶ, ಆನೆ ಕಾರಿಡಾರ್ ಬಫರ್ ವಲಯದಲ್ಲಿ ಲೇಔಟ್ ನಿರ್ಮಾಣ ಮಾಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ತರೀಕೆರೆಯಲ್ಲಿ ಮಾತನಾಡಿದ ಅವರು, ಬಫರ್ ವಲಯದಲ್ಲಿ ಲೇಔಟ್ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಅವರು ನೋಟಿಸ್ ನೀಡಿದ್ದು, ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶ ಮಾತ್ರವಲ್ಲದೇ ಭೂ ಸುಧಾರಣೆ ಕಾಯ್ದೆಯನ್ನು ಕೂಡ ಉಲ್ಲಂಘಿಸಲಾಗಿದ್ದು, ಕಂದಾಯ ಮತ್ತು ಅರಣ್ಯ ಸಚಿವರ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಪರಿಸರ ಹಾನಿಗೆ ಅವಕಾಶ ನೀಡುವುದಿಲ್ಲ. ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್ ಬಫರ್ ವಲಯದಲ್ಲಿ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.