ನವದೆಹಲಿ: ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಒಬಿಸಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಅಡ್ಡಿಪಡಿಸಿತ್ತು. ಆದರೆ, ವೋಟ್ ಬ್ಯಾಂಕ್ ಗಾಗಿ ಧರ್ಮಧಾರಿತ ಮೀಸಲಾತಿಯನ್ನು ಕಾಂಗ್ರೆಸ್ ನೀಡಿತು. ವೋಟ್ ಬ್ಯಾಂಕ್ ರಾಜಕಾರಣದಿಂದ ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಟೀಕಿಸಿದ್ದಾರೆ.
ಸಂವಿಧಾನದ ಮೇಲೆ ಒಂದು ಕುಟುಂಬ ದಾಳಿಯ ಬಗ್ಗೆ ಇತಿಹಾಸವೇ ಹೇಳುತ್ತದೆ. ಒಂದು ಕುಟುಂಬ ಸಂವಿಧಾನಕ್ಕೆ ಸವಾಲು ಹಾಕುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ. ಇದು ಸಂವಿಧಾನ ಜಾರಿ ಮಾಡಿದವರಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ್ದಾರೆ.
ಜವಹರಲಾಲ್ ನೆಹರು ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದು, ವೈಯಕ್ತಿಕ ಹಿತಾಸಕ್ತಿ ಗಾಗಿ ಸಂವಿಧಾನ ತಿದ್ದುಪಡಿಗೆ ನೆಹರು ಮುಂದಾಗಿದ್ದರು. ನೆಹರು ನಿರ್ಧಾರಕ್ಕೆ ಅಂದಿನ ರಾಷ್ಟ್ರಪತಿ ವಿರೋಧ ವ್ಯಕ್ತಪಡಿಸಿದ್ದರು. 60 ವರ್ಷಗಳಲ್ಲಿ 75 ಸಲ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ನೆಹರು, ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ಆಗಿದೆ. ಒಂದು ಕುಟುಂಬವನ್ನು ರಕ್ಷಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ವೇಳೆ ಸಾವಿರಾರು ಹೋರಾಟಗಾರರನ್ನು ಜೈಲಿಗೆ ಹಾಕಿದ್ದರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ತುರ್ತುಪರಿಸ್ಥಿತಿ ಜಾರಿ ಮಾಡಿದರು. ಇದು ಪ್ರಜಾಪ್ರಭುತ್ವದ ಕಪ್ಪು ಚುಕ್ಕೆಯಾಗಿದೆ. ತುರ್ತು ಪರಿಸ್ಥಿತಿ ಜಾರಿ ಕಾಂಗ್ರೆಸ್ ಆಡಳಿತಕ್ಕೆ ಕಳಂಕ ಇದ್ದಂತೆ ಎಂದು ಹೇಳಿದ್ದಾರೆ.
ಸರ್ಕಾರಕ್ಕಿಂತ ಪಕ್ಷವೇ ಮುಖ್ಯವೆಂದು ಡಾ. ಮನಮೋಹನ್ ಸಿಂಗ್ ಹೇಳಿದ್ದರು ಎಂದು ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಸಿಂಗ್ ಪ್ರಧಾನಿಯಾಗಿದ್ದಾಗ ಸೋನಿಯಾ ಗಾಂಧಿ ಸೂಪರ್ ಪಿಎಂ ಆಗಿದ್ದರು. ಸಿಂಗ್ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಹೆಚ್ಚಿನ ಅಧಿಕಾರ ಹೊಂದಿದ್ದರು ಎಂದು ಹೇಳಿದ್ದಾರೆ.